ಜಿಲ್ಲೆ

ಗ್ರಾಮ ಪಂಚಾಯತ್ ಕಚೇರಿಯಲ್ಲೇ ಕಳ್ಳತನ; ವಾರದೊಳಗೇ ಕಳ್ಳರಿಬ್ಬರ ಬಂಧನ

Webdesk - Ravikanth

ಕೋಲಾರ: ಗ್ರಾಮ ಪಂಚಾಯತ್ ಕಚೇರಿಯೊಂದರಲ್ಲಿ ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಇಬ್ಬರ ಕಳ್ಳರನ್ನು, ಪ್ರಕಣರ ನಡೆದ ವಾರದೊಳಗೇ ಪತ್ತೆ ಮಾಡಿರುವ ಪೊಲೀಸರು, ಅವರನ್ನು ಬಂಧಿಸಿದ್ದಾರೆ.

ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ತೊರಲಕ್ಕಿ ಗ್ರಾಮದ ಸದ್ದಾಂ (೨೪), ಮುಳಬಾಗಿಲು ಪಟ್ಟಣದ ಮೆಹಬೂಬ್ ನಗರದ ತಬ್ರಜ್ (೨೦) ಬಂಧಿತ ಆರೋಪಿಗಳು. ಮುಳಬಾಗಿಲು ಪೊಲೀಸರು ಇವರನ್ನು ಬಂಧಿಸಿದ್ದು, ಲಕ್ಷಾಂತರ ಬೆಲೆಬಾಳುವ ಕದ್ದಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಸೊನ್ನವಾಡಿ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಮಾರ್ಚ್ 30ರಂದು ಕಳ್ಳತನ ಮಾಡಿದ್ದರು. ಗ್ರಾಮ ಪಂಚಾಯತ್ ಕಚೇರಿಯ ಬೀಗ ಒಡೆದು ಕಂಪ್ಯೂಟರ್, ಪ್ರಿಂಟರ್​, ಬ್ಯಾಟರಿಗಳು ಸೇರಿ ಲಕ್ಷಾಂತರ ಬೆಲೆಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗಿದ್ದರು.

ಬಂಧಿತ ಆರೋಪಿಗಳಿಂದ 4 ಕಂಪ್ಯೂಟರ್ ಮಾನಿಟರ್​, 4 ಸಿಪಿಯು, 5 ಬ್ಯಾಟರಿಗಳು, 2 ಪ್ರಿಂಟರ್, 2 ಎಲ್ಇಡಿ ಟಿವಿ, ಒಂದು ಇಂಟರ್ನೆಟ್ ಸೇರಿ ಸುಮಾರು 3.3 ಲಕ್ಷ ರೂಪಾಯಿ ಬೆಲೆಬಾಳುವ ವಸ್ತುಗಳನ್ನು ಮುಳಬಾಗಿಲು ಪೋಲಿಸರು ವಶಪಡಿಸಿಕೊಂಡಿದ್ದಾರೆ.