ಉತ್ತರಕನ್ನಡ/ಬೀದರ್: ರಾಜ್ಯದಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಲ್ಲಿ ಇಬ್ಬರು ಯುವಕರು ನೀರುಪಾಲಾಗಿ ಮೃತಪಟ್ಟಿದ್ದಾರೆ. ಒಂದು ಅನಾಹುತ ಉತ್ತರಕನ್ನಡ ಜಿಲ್ಲೆಯಲ್ಲಿ ನಡೆದಿದ್ದರೆ ಇನ್ನೊಂದು ಬೀದರ್ ಜಿಲ್ಲೆಯಲ್ಲಿ ಸಂಭವಿಸಿದೆ.
ಉತ್ತರಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಮಳಗಿಯ ನಾಗಿನಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಮುಂಡಗೋಡು ನಿವಾಸಿ ಉಮೇಶ ಬೋವಿವಡ್ಡರ್ (28) ಮೃತಪಟ್ಟಿದ್ದಾನೆ. ಮುಳುಗಿ ಕೆರೆಯಲ್ಲಿ ಸಿಲುಕಿದ್ದ ಈತನ ಮೃತದೇಹವನ್ನು ಸ್ಥಳೀಯರು ಹೊರತೆಗೆದಿದ್ದು, ಮುಂಡಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಲಾಡವಂತಿ ಗ್ರಾಮದ ವಿದ್ಯಾರ್ಥಿ ಅಮೀತ ಬಿರಾದಾರ ( 18) ಎಂಬ ವಿದ್ಯಾರ್ಥಿ ನೀರುಪಾಲಾಗಿ ಸಾವಿಗೀಡಾಗಿದ್ದಾನೆ. ಈಜು ಬರದಿದ್ದರೂ ಗ್ರಾಮದ ಹೊರವಲಯದಲ್ಲಿರುವ ಬಾವಿಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಈ ಕುರಿತು ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.