ಬೆಂಗಳೂರು: ನಗರದಲ್ಲಿ ಶನಿವಾರ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರ ಹತ್ಯೆಯಾಗಿದೆ. ಪಿ ಆಂಡ್ ಟಿ ಕಾಲನಿಯಲ್ಲಿ ಪತ್ನಿ ಜತೆ ಅನೈತಿಕ ಸಂಬಂಧ ಹೊಂದಿದ್ದ ಸ್ನೇಹಿತನನ್ನು ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದ್ದು, ಕ್ಷುಲ್ಲಕ ಕಾರಣಕ್ಕೆ ಕಾಡುಗೊಂಡನಹಳ್ಳಿಯಲ್ಲಿ ಗೆಳೆಯನ ಹತ್ಯೆ ನಡೆದಿದೆ.
ಡಿ.ಜೆ.ಹಳ್ಳಿಯ ಪಿ ಆಂಡ್ ಟಿ ಕಾಲನಿ ನಿವಾಸಿ ಸುಭಾನ್ (30) ಹಾಗೂ ಗೋವಿಂದಪುರ ನಿವಾಸಿ ಅಜ್ಗರ್ (20) ಕೊಲೆಯಾದವರು. ಆರೋಪಿಗಳು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಪೂರ್ವ ವಿಭಾಗದ ಡಿಸಿಪಿ ಡಾ. ಎಸ್.ಡಿ. ಶರಣಪ್ಪ ತಿಳಿಸಿದ್ದಾರೆ.
ಕಪಾಳಕ್ಕೆ ಹೊಡೆದಿದ್ದಕ್ಕೆ ಚೂರಿಯಿಂದ ಇರಿದ: ಗೋವಿಂದಪುರದ ಅಜ್ಗರ್, ಸಮೀರ್ ಮತ್ತು ಸಲ್ಮಾನ್ ಸ್ನೇಹಿತರಾಗಿದ್ದರು. ಎರಡ್ಮೂರು ದಿನದ ಹಿಂದೆ ಸಲ್ಮಾನ್ ಮತ್ತು ಅಜ್ಗರ್ ನಡುವೆ ಗಲಾಟೆಯಾಗಿತ್ತು. ಆಕ್ರೋಶಗೊಂಡಿದ್ದ ಅಜ್ಗರ್, ಸಲ್ಮಾನ್ ಕಪಾಳಕ್ಕೆ ಹೊಡೆದಿದ್ದ. ಬಳಿಕ ಇಬ್ಬರೂ ರಾಜಿ ಮಾಡಿಕೊಂಡಿದ್ದರು. ಶನಿವಾರ (ಮೇ 30) ರಾತ್ರಿ ಮೂವರೂ ಪಾರ್ಟಿ ಮಾಡುವಾಗ ಮತ್ತೆ ಗಲಾಟೆಯಾಗಿದೆ. ಸಲ್ಮಾನ್ ಮತ್ತು ಸಮೀರ್ ಸೇರಿ ಅಜ್ಗರ್ಗೆ ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಕಾಡುಗೊಂಡನಹಳ್ಳಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಬಾಲಿವುಡ್ನ ಸಂಗೀತ ನಿರ್ದೇಶಕ ವಾಜಿದ್ ಖಾನ್ ನಿಧನ
ಸ್ನೇಹಿತನ ಪತ್ನಿ ಜತೆ ಅನೈತಿಕ ಸಂಬಂಧ: ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಸುಭಾನ್, 3 ವರ್ಷದ ಹಿಂದೆ ನಗರಕ್ಕೆ ಬಂದು ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ಪಿಎನ್ಟಿ ಕಾಲನಿ ನಿವಾಸಿ ತಬ್ರೇಜ್ ಜತೆ ಸ್ನೇಹ ಬೆಳೆದಿತ್ತು. ಆಗಾಗ ತಬ್ರೇಜ್ ಮನೆಗೆ ಹೋಗಿಬರುತ್ತಿದ್ದ. ಈ ವೇಳೆ ತಬ್ರೇಜ್ ಪತ್ನಿಯ ಪರಿಚಯವಾಗಿದ್ದು, ಇಬ್ಬರ ನಡುವಿನ ಪರಿಚಯ ಅನೈತಿಕ ಸಂಬಂಧಕ್ಕೆ ತಿರುಗಿತ್ತು. ತಬ್ರೇಜ್ ಮನೆಯಲ್ಲಿ ಇಲ್ಲದ ವೇಳೆ ಆಕೆಯನ್ನು ಭೇಟಿಯಾಗುತ್ತಿದ್ದ. ಈ ವಿಚಾರ ಸ್ಥಳೀಯರ ಮೂಲಕ ತಬ್ರೇಜ್ಗೆ ಗೊತ್ತಾಗಿತ್ತು. ತನ್ನ ಪತ್ನಿ ಹಾಗೂ ಸುಭಾನ್ಗೆ ಎಚ್ಚರಿಸಿದ್ದ. ಎಂಟು ತಿಂಗಳ ಹಿಂದೆ ಸುಭಾನ್ ಆಕೆಯನ್ನು ಮನೆಯಿಂದ ಕರೆದುಕೊಂಡು ಹೋಗಿದ್ದ. ಕೆಲ ದಿನಗಳ ಹಿಂದೆಯಷ್ಟೇ ಇಬ್ಬರೂ ವಾಪಸಾಗಿದ್ದರು.
ಇದೇ ವಿಚಾರವಾಗಿ ಸುಭಾನ್ ಜತೆ ತಬ್ರೇಜ್ ಗಲಾಟೆ ಮಾಡಿಕೊಂಡಿದ್ದ. ಸುಭಾನ್ ಜತೆ ಪತ್ನಿ ಮತ್ತೆ ಮನೆ ಬಿಟ್ಟು ಹೋಗಲು ಸಜ್ಜಾಗಿರುವುದು ತಬ್ರೇಜ್ಗೆ ಗೊತ್ತಾಗಿದೆ. ಇದರಿಂದ ಆಕ್ರೋಶಗೊಂಡು, ಶನಿವಾರ (ಮೇ 30) ತನ್ನ ಪರಿಚಯಸ್ಥರ ಜತೆಗೂಡಿ ಸುಭಾನ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿ ಶವವನ್ನು ದೇವರಜೀವನಹಳ್ಳಿಯ ಶ್ಯಾಂಪುರ ಗೇಟ್ ಸಮೀಪ ಚರಂಡಿಯಲ್ಲಿ ಎಸೆದಿದ್ದರು. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ಹೋಗಿ ಪರಿಶೀಲಿಸಲಾಗಿದೆ. ತಬ್ರೇಜ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.