ಜಿಲ್ಲೆ

ಬೆಂಗಳೂರು ಕಂಬಳ ನೋಡಿ ವಾಪಸ್ಸಾಗುತ್ತಿದ್ದವರ ಕಾರಿಗೆ ಲಾರಿ ಡಿಕ್ಕಿ; ಇಬ್ಬರ ಸಾವು

ತುಮಕೂರು: ಬೋರ್​ವೆಲ್​ ಲಾರಿ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮರತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಚಿಗಣಿಪಾಳ್ಯ ಬಳಿ ನಡೆದಿದೆ. 

ಮಂಗಳೂರಿನ ಕಿಶನ್ ಶೆಟ್ಟಿ (20) ಹಾಗೂ ಫೀಲಿಪ್ ನೇರಿ (32) ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ. ಕಿಶನ್​ ಶೆಟ್ಟಿ ಮಂಗಳೂರಿನ ಪರೆರಾರ ಬಜಪ್ಪೆ ಗ್ರಾಮದ ನಿವಾಸಿಯಾfಗಿದ್ದು, ಫೀಲೀಪ್ ನೇರಿ ದಕ್ಷಿಣ ಕನ್ನಡ ಜಿಲ್ಲೆಯ ಭಟ್ಟರ ತೋಟದ ಗ್ರಾಮದ ವಾಸಿಗಳಾಗಿದ್ದಾರೆ ಎಂದು ವರದಿಯಾಗಿದೆ.

ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ಆಯೋಜನೆಗೊಂಡಿರುವ ಕಂಬಳವನ್ನು ನೋಡಿಕೊಂಡು ಉರಿಗೆ ವಾಪಸ್​ ಆಗುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದ್ದು,  ಲಾರಿ ಡಿಕ್ಕಿ ಹೊಡೆದ‌ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವವರನ್ನು ಆದಿಚುಂಚನಗಿರಿಯ ಬಿಜಿಎಸ್​ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಗಾಯಾಳುಗಳ ಮೇಲೆ ನಿಗಾ ವಹಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕುಣಿಗಲ್​ ಠಾಣೆ ಪೊಲೀಸರು ಲಾರಿ ಹಾಗೂ ಅದರ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಕುಣಿಗಲ್ ‌ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.