ಬಾಗಲಕೋಟೆ: ತುಂಬಿ ಹರಿಯುತ್ತಿದ್ದ ಹಳ್ಳಕ್ಕೆ ಬಾಲಕ ಕಾಲು ಜಾರಿ ಬಿದ್ದ ಕೂಡಲೇ ಆತನನ್ನು ಉಳಿಸುವ ಸಲುವಾಗಿ ನೀರಿಗಿಳಿದ ಯುವಕ ಕೂಡ ಸಾವಿಗೀಡಾದ ಘಟನೆ ಬಾಗಲಕೋಟೆಯ ಇಳಕಲ್ ತಾಲೂಕಿನ ಚಿಕನಾಳ ಗ್ರಾಮದಲ್ಲಿ ಸಂಭವಿಸಿದೆ.
ಇದನ್ನೂ ಓದಿ: ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ವಾಹನ ಡಿಕ್ಕಿ; ಹಿರಿಯ ವೈಎಸ್ಆರ್ ಕಾಂಗ್ರೆಸ್ ಕಾರ್ಯಕರ್ತ ಸಾವು| Jagan Reddy
ಹೊಲಕ್ಕೆ ಹೋಗುತ್ತಿದ್ದ ವೇಳೆ ಕಾಲು ಜಾರಿ ಬಿದ್ದು ಇಬ್ಬರೂ ಮೃತಪಟ್ಟಿದ್ದಾರೆ. ಹಳ್ಳಕ್ಕೆ ಬಿದ್ದ ಬಾಲಕನ ಜೀವ ಉಳಿಸಲು ಹೋದ ಯುವಕ ಕೂಡ ಪ್ರಾಣ ಕಳೆದುಕೊಂಡಿರುವುದು ಸದ್ಯ ಹೆತ್ತವರ ಆಕ್ರಂದನಕ್ಕೆ ಕಾರಣವಾಗಿದೆ. ಮೃತರನ್ನು ಮಂಜುನಾಥ ಬಾಲಪ್ಪ ಬಂಡಿ (13) ಮತ್ತು ಷಣ್ಮುಖಪ್ಪ ತಿಪ್ಪಣ್ಣವರ (30) ಎಂದು ಗುರುತಿಸಲಾಗಿದೆ.
ಮೃತ ಯುವಕ ಷಣ್ಮುಖಪ್ಪ ಚಿಕನಾಳ ಗ್ರಾಮದ ನಿವಾಸಿಯಾದರೆ, ಬಾಲಕ ಮಂಜುನಾಥ್ ಕೊಪ್ಪಳ ಜಿಲ್ಲೆ ಬಳೂಟಗಿ ಗ್ರಾಮದ ನಿವಾಸಿ. ಇಬ್ಬರ ಮೃತದೇಹವನ್ನು ಸ್ಥಳೀಯರು ಹೊರತೆಗೆದಿದ್ದು, ಪ್ರಕರಣ ಅಮೀನಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.