ತುಮಕೂರು: ಕಾಣೆಯಾಗಿದ್ದ ಮಗ ಮರಳಿ ಮನೆಗೆ ಬಂದರೆ ಯಾವ ತಂದೆ-ತಾಯಿಗೆ ತಾನೇ ಖುಷಿಯಾಗಲ್ಲ. ಅದರಲ್ಲೂ 10 ವರ್ಷಗಳ ಹಿಂದೆ ಕಾಣೆಯಾಗಿದ್ದ ಮಗ ಮರಳಿ ಬಂದರೆ ಪಾಲಕರ ಸಂಭ್ರಮ ಹೇಗಿರುತ್ತದೆ ಎಂಬುದನ್ನು ಅಂದಾಜು ಸಹ ಮಾಡಲಾಗದು. ಆದರೆ, ಈ ಸ್ಟೋರಿಯಲ್ಲಿ ಆಗಿದ್ದೆಲ್ಲಾ ಉಲ್ಟಾಪಲ್ಟಾ.
ಕಾಣೆಯಾದ ಮಗ 10 ವರ್ಷದ ನಂತರ ಪತ್ತೆಯಾದರೂ ತಂದೆ-ತಾಯಿ ಮಾತ್ರ ಆತನನ್ನು ಮನೆಗೆ ಬಿಟ್ಟುಕೊಳ್ಳಲಿಲ್ಲ. ಹೀಗೊಂದು ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಗುನ್ನಾಗೆರೆ ಗ್ರಾಮದಲ್ಲಿ ನಡೆದಿದೆ. ಅಯ್ಯೋ ಇವರೆಂಥ ತಂದೆ-ತಾಯಿ ಎಂದು ಟೀಕಿಸುವ ಮುನ್ನ ಒಮ್ಮೆ ಪೂರ್ತಿ ಓದಿದರೆ ಒಳ್ಳೆಯದು.
ಕೃಷ್ಣಪ್ಪ ಎನ್ನುವವರ ಮಗ ರಂಗಸ್ವಾಮಿ 10 ವರ್ಷದ ಹಿಂದೆ ಶಾಲೆಗೆಂದು ಹೋಗಿದಾಗ ನಾಪತ್ತೆಯಾಗಿದ್ದ. ಊರಿಗೆ ಮರಳಲಾರದೇ ಬೀದರ್ ಜಿಲ್ಲೆಯ ಬಾಲ್ಕಿಯಲ್ಲಿ ರಂಗಸ್ವಾಮಿ ಕೆಲಸ ಮಾಡಿಕೊಂಡಿದ್ದ. ಲಾಕ್ಡೌನ್ನಿಂದ ಕೆಲಸ ಇಲ್ಲದೇ ಗುನ್ನಾಗೆರೆ ಗ್ರಾಮಕ್ಕೆ ಶುಕ್ರವಾರ ಆಗಮಸಿದ್ದ.
ಇತ್ತ ಮಗ ಮರಳಿ ಬಂದ ಸಂತೋಷವಿದ್ದರೂ ಮನೆಯೊಳಗೆ ಸೇರಿಸಿಕೊಳ್ಳದೇ ಮಹಾಮಾರಿ ಕರೊನಾ ವೈರಸ್ ಭೀತಿಯಿಂದ ಸಂಬಂಧಿಸಿದವರಿಗೆ ಮಾಹಿತಿ ನೀಡಿ ತಂದೆ-ತಾಯಿಯೇ ರಂಗಸ್ವಾಮಿಯನ್ನು ಕ್ವಾರಂಟೈನ್ಗೆ ಕಳುಹಿಸಿದ್ದಾರೆ. ಸದ್ಯ ರಂಗಸ್ವಾಮಿ ಹುಲಿಯೂರು ದುರ್ಗದ ಹೇಮಗಿರಿಬೆಟ್ಟದ ವಸತಿ ಶಾಲೆಯಲ್ಲಿ ಕ್ವಾರಂಟೈನ್ನಲ್ಲಿದ್ದಾರೆ. ಡೆಡ್ಲಿ ಕರೊನಾ ಎಷ್ಟೆಲ್ಲಾ ಭೀತಿ ಸೃಷ್ಟಿಸಿದೆ ಎಂಬುದಕ್ಕೆ ಈ ಒಂದು ಘಟನೆ ಉದಾಹರಣೆಯಾಗಿದೆ. (ದಿಗ್ವಿಜಯ ನ್ಯೂಸ್)