ಜಿಲ್ಲೆ

ನಟ, ನಿರ್ದೇಶಕ ಟಿ.ಎಸ್​. ನಾಗಾಭರಣಗೆ ತುಮಕೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್​

ತುಮಕೂರು: ನಟ, ನಿರ್ದೇಶಕ, ರಂಗಕರ್ಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಟಿ.ಎಸ್​. ನಾಗಾಭರಣ ಅವರಿಗೆ ತುಮಕೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್​ ನೀಡಲಿದೆ. ನಾಗಾಭರಣ ಅವರ ಜೊತೆಗೆ ತುಮಕೂರು ಮೂಲದ ಸಮಾಜ ಸೇವಕರಾದ ಆರ್.ಎಲ್​. ರಮೇಶ್​ ಬಾಬು ಎಂಬುವವರಿಗೂ ವಿಶ್ವವಿದ್ಯಾಲಯದ ವತಿಯಿಂದ ಗೌರವ ಡಾಕ್ಟರೇಟ್​ ಪ್ರದಾನ ಮಾಡಲಾಗುತ್ತಿದೆ.

ಈ ಕುರಿತು ಮಾತನಾಡಿದ ತುಮಕೂರು ವಿವಿ ಕುಲಪತಿ ಪ್ರೊ. ವೆಂಕಟೇಶ್ವರಲು ಕನ್ನಡ ಚಲನಚಿತ್ರರಂಗದಲ್ಲಿ ನಾಗಾಭರಣ ಅವರು ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರೇಟ್​ ಪ್ರದಾನ ಮಾಡಲಾಗುತ್ತಿದೆ. ತುಮಕೂರು ವಿವಿಯ ಕಲಾ ಕಾಲೇಜಿನಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ನೆರವು ನೀಡುತ್ತಿರುವ ಆರ್.ಎಲ್​. ರಮೇಶ್​ ಬಾಬು ಅವರಿಗೂ ಸಹ ಗೌರವ ಡಾಕ್ಟರೇಟ್​ ಪ್ರದಾನ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ತುಮಕೂರು ವಿವಿ ವತಿಯಿಂದ ಗೌರವ ಡಾಕ್ಟರೇಟ್​ಗೆ ಆಯ್ಕೆ ಮಾಡಲು ನೇಮಿಸಿದ್ದ ಸಮಿತಿಯ ಶಿಫಾರಸ್ಸಿಗೆ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ. ಆಗಸ್ಟ್​ 7ರಂದು ವಿಶ್ವವಿದ್ಯಾಲಯದ 16ನೇ ಘಟಿಕೋತ್ಸವ ನಡೆಯಲಿದ್ದು, ರಾಜ್ಯಪಾಲರಾದ ಥಾವರ್​ಚಂದ್​ ಗೆಹ್ಲೋತ್​ ಗೌರವ ಡಾಕ್ಟರೇಟ್​ ಪದವಿ ಪ್ರದಾನ ಮಾಡಲಿದ್ದಾರೆ ಎಂದು ಕುಲಪತಿ ಪ್ರೊ. ವೆಂಕಟೇಶ್ವರಲು ತಿಳಿಸಿದ್ದಾರೆ.

ಆರ್​.ಎಲ್​. ರಮೇಶ್​ ಬಾಬು(ಎಡ), ಟಿ.ಎಸ್​. ನಾಗಾಭರಣ(ಬಲ)