ದಾವಣಗೆರೆ: ಒಂದು ಪಟ್ಟು ಹಣಕ್ಕೆ ಮೂರು ಪಟ್ಟು ನೀಡುವುದಾಗಿ ನಂಬಿಸಿ ವಂಚಿಸಿದ ಆರೋಪದ ಮೇಲೆ ಚಿತ್ರದುರ್ಗದ ನಗರಸಭೆ ಸದಸ್ಯ ಚಂದ್ರಶೇಖರ, ಬೆಂಗಳೂರಿನ ವಿದ್ಯಾರ್ಥಿಯೊಬ್ಬ ಸೇರಿ 9 ಅಂತರ ಜಿಲ್ಲಾ ವಂಚಕರನ್ನು ಪೊಲೀಸರು ಬಂಧಿಸಿ 2.05 ಲಕ್ಷ ರೂ. ನಗದು, ಮೊಬೈಲ್ಫೋನ್ ಹಾಗೂ ಕಾರು ವಶಪಡಿಸಿಕೊಂಡಿದ್ದಾರೆ.
ಚಿತ್ರದುರ್ಗದ ನಗರಸಭೆ ಸದಸ್ಯ ಚಂದ್ರಶೇಖರ, ಕೇಬಲ್ ಆಪರೇಟರ್ ಎಸ್.ಕೆ. ರಾಜೇಶ್, ತೇಜಸ್ವಿನಿ, ದೇವಕಿ, ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕು ಕೋಡಿಹಳ್ಳಿಯ ಕೆ.ಟಿ.ಮೂರ್ತಿ, ಕೆ.ಟಿ.ನವೀನ್, ಕಡೂರು ತಾಲೂಕು ಹೋರಿತಿಮ್ಮನಹಳ್ಳಿಯ ಪ್ರದೀಪ ಹಾಗೂ ಬೆಂಗಳೂರಿನ ವಿದ್ಯಾರ್ಥಿ ವಿಜಯರೆಡ್ಡಿಹಳ್ಳಿ ಎಲ್‌ಐಸಿ ಕಾಲನಿಯ ವರುಣ್ ಕಾರ್ತಿಕ್, ಆಟೋ ಚಾಲಕ ವೀರಪ್ಪ ರೆಡ್ಡಿ ಲೇ ಔಟ್‌ನ ಬಾಬು ಬಂಧಿತರು. ದೊಡ್ಡಬಳ್ಳಾಪುರ ತಾಲೂಕು ದೊಡ್ಡಬೆಲವಂಗಲದ ನಾಗರಾಜ ವಂಚನೆಗೆ ಈಡಾದವರು.
ಮಲ್ಲಯ್ಯ ಅವರು ಕಡೂರು ತಾಲೂಕು ಕೋಡಿಹಳ್ಳಿಯಲ್ಲಿ ತಮಗೆ ಪರಿಚತರಾದ ಮೂರ್ತಿ ಮತ್ತು ಮಂಜುನಾಥ ಅವರ ಮಾತು ಕೇಳಿ ಚಿತ್ರದುರ್ಗದ ಚಂದ್ರಶೇಖರ ಅವರಿಗೆ 6 ಲಕ್ಷ ರೂ. ನೀಡಿ ಒಂದಕ್ಕೆ ಮೂರು ಪಟ್ಟು ಹಣ ನಿರೀಕ್ಷಿಸಿದ್ದರು.
ಚಿತ್ರದುರ್ಗದ ಜೈಲ್ ರಸ್ತೆಯಲ್ಲಿರುವ ಕೆಇಬಿ ಸ್ಟೇಷನ್ ಬಳಿ ಆಗಮಿಸಿದ್ದ ಮಲ್ಲಯ್ಯ ಅವರಿಂದ 6 ಲಕ್ಷ ರೂ. ಪಡೆದ ಚಂದ್ರಶೇಖರ್ ಒಂದು ಬ್ಯಾಗ್ ನೀಡಿ 18 ಲಕ್ಷ ರೂ. ಇದೆ. ಸುರಕ್ಷಿತವಾಗಿ ತೆಗೆದುಕೊಂಡು ಹೋಗುವಂತೆ ತಿಳಿಸಿದ್ದರು. ಅನುಮಾನ ಬಂದು 6 ಲಕ್ಷ ರೂ. ಹಣ ವಾಪಸ್ ನೀಡುವಂತೆ ಮಲ್ಲಯ್ಯ ಕೋರಿದ್ದರು. ನೀಡದೆ ಹೋದಾಗ ಡಿ.6ರಂದು ಪೊಲೀಸರಿಗೆ ದೂರು ನೀಡಿದ್ದರು. ಚಿತ್ರದುರ್ಗ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ತಿಳಿಸಿದ್ದಾರೆ.
ನಗರಸಭೆ ಸದಸ್ಯ ಚಂದ್ರಶೇಖರ ಮಧ್ಯವರ್ತಿಗಳು ಹಾಗೂ ಕುಟುಂಬ ಸದಸ್ಯರ ಮೂಲಕ ಜನರನ್ನು ಸಂಪರ್ಕಿಸಿ ಒಂದಕ್ಕೆ ಮೂರು ಪಟ್ಟು ಹಣ ಕೊಡುವುದಾಗಿ ನಂಬಿಸಿ ಅವರನ್ನು ಚಿತ್ರದುರ್ಗಕ್ಕೆ ಕರೆಸಿಕೊಂಡು ನೋಟಿನ ಅಳತೆಯಲ್ಲಿ ಕತ್ತರಿಸಿದ ಕಪ್ಪು ಬಣ್ಣದ ಪೇಪರ್‌ಗಳ ಕಟ್ಟು ಕಟ್ಟಿ ಮೇಲ್ಬಾಗ, ಕೆಳ ಭಾಗದಲ್ಲಿ ಒಂದೊಂದು ಅಸಲಿ ನೋಟು ಇಟ್ಟ ಬ್ಯಾಗ್ ಗಿರಾಕಿಗಳಿಗೆ ನೀಡಿ ಮೂರು ಪಟ್ಟು ಹಣ ಎಂದು ನಂಬಿಸುತ್ತಿದ್ದನು.
ಕರೆಸಿಕೊಂಡವರ ಗಮನ ಬೇರೆಡೆ ಸೆಳೆದು, ಮೊದಲೇ ತಯಾರಿಟ್ಟುಕೊಂಡಿದ್ದ ಒಂದು-ಎರಡು ನೋಟುಗಳನ್ನು ಬ್ಯಾಗ್‌ನಿಂದ ಎತ್ತಿ ಯಾವುದೋ ಕೆಮಿಕಲ್ ಬಳಸಿ ತೊಳೆದು ನೀಡಿ ಕೆಮಿಕಲ್‌ನಿಂದ ತೊಳೆದಾಗ ಇವು ಅಸಲಿ ಆಗುತ್ತವೆ. ಅನುಮಾನ ಬಂದರೆ ಬ್ಯಾಂಕ್‌ನಲ್ಲಿ ಪರೀಕ್ಷಿಸಿಕೊಳ್ಳಿ ಎಂದು ಹೇಳುತ್ತಿದ್ದನು.
ನಗರದ ಯಾವುದೋ ರಸ್ತೆಗೆ ಬರಲು ತಿಳಿಸಿ, ಮೂರು ಪಟ್ಟು ಹಣ ನೀಡುವ ವೇಳೆ ತಮ್ಮ ಕಡೆಯವರೊಬ್ಬರು ಪೊಲೀಸ್ ಸಮವಸ್ತ್ರದಲ್ಲಿ ವಿಜಲ್ ಹಾಕುತ್ತ ಸ್ಥಳಕ್ಕೆ ಬರುವಂತೆ ಪ್ಲ್ಯಾನ್ ಮಾಡುತ್ತಿದ್ದರು. ಆಗ ಪೊಲೀಸ್, ಪೊಲೀಸ್ ಎಂದು ಎಲ್ಲರೂ ಅಲ್ಲಿಂದ ಚದುರಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಿದ್ದರು ಎಂದು ಪೊಲಿಸರು ತಿಳಿಸಿದ್ದಾರೆ.