ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಕಲೆ ಹಾಗೂ ಕಲಾವಿದರಿಗೆ ನೀಡುವ ಗೌರವದಿಂದ ಕಲೆಯ ಬೆಳವಣಿಗೆಗೆ ಸಹಾಯವಾಗುತ್ತದೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು. ಮಾನವಹಕ್ಕು ಆಯೋಗದ ಹಂಗಾಮಿ ಅಧ್ಯಕ್ಷ, ಶ್ರೀ ಎಡನೀರು ಮಠದ ಶಿಷ್ಯರಲ್ಲೊಬ್ಬರಾದ ಡಾ.ಟಿ.ಶ್ಯಾಂ ಭಟ್ ಅವರಿಗೆ ಚಾತುರ್ಮಾಸ್ಯ ಸಮಿತಿ ಮಾನ್ಯ ವಲಯ ಸಮಿತಿಯಿಂದ ಶ್ಯಾಂ ಭಟ್ಟರ ಅಭಿಮಾನಿ ಬಳಗ ಆಯೋಜಿಸಿದ ಸನ್ಮಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ನಾಲ್ಕನೇ ಚಾತುರ್ಮಾಸ್ಯ ಸಮಾರಂಭದ ಅಂಗವಾಗಿ ಎಡನೀರು ಮಠದ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರು ಟಿ.ಶ್ಯಾಂ ಭಟ್ ಅವರನ್ನು ಸನ್ಮಾನಿಸಿ ಆಶೀರ್ವಚನ ನೀಡಿ, ಯಕ್ಷಗಾನ ಕಲೆ ಹಾಗೂ ಕಲಾವಿದರ ಮೇಲೆ ಟಿ.ಶ್ಯಾಂ ಭಟ್ ಅವರಿಗಿರುವ ಪ್ರೀತಿ ಅಪಾರವಾದುದು. ತಾವು ನಡೆದುಬಂದ ಹಾದಿಯನ್ನು ಎಂದಿಗೂ ಮರೆಯದೆ, ಸರಳತೆ ಕಾಯ್ದುಕೊಂಡು ಬಂದ ಸ್ನೇಹಜೀವಿಯಾಗಿದ್ದಾರೆ ಎಂದು ಬಣ್ಣಿಸಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರ ಕಮಲಾದೇವಿಪ್ರಸಾದ ಆಸ್ರಣ್ಣ ಅನುಗ್ರಹ ಭಾಷಣ ಮಾಡಿದರು. ಉದ್ಯಮಿ ಮಧುಸೂದನ ಆಯರ್ ಉಪಸ್ಥಿತರಿದ್ದರು. ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಅಭನಂದನಾ ಭಾಷಣ ನಡೆಸಿದರು. ಯಕ್ಷಗಾನ ಕಲಾವಿದ ಮಾಧವ ಸನ್ಮಾನ ಪತ್ರ ವಾಚಿಸಿದರು. ಶ್ರೀಕೃಷ್ಣ ಭಟ್ ಪುದುಕ್ಕೋಳಿ ಸ್ವಾಗತಿಸಿದರು. ಕೃಷ್ಣಮೂರ್ತಿ ಪುದುಕ್ಕೋಳಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಹೇಶ್ ವಳಕುಂಜ ವಂದಿಸಿದರು.