ಬೆಂಗಳೂರು: ಕರಾವಳಿಯ ಸಾಂಪ್ರದಾಯಿಕ ಎಮ್ಮೆಗಳ ಓಟ ಕಂಬಳ ಪ್ರಥಮ ಬಾರಿಗೆ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಭಾರಿ ಸಿದ್ಧತೆ ನಡೆದಿದೆ. ಕಂಬಳ ಓಟವು ನ.24ರಿಂದ 26ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ತುಳುನಾಡಿನ ಸಂಪ್ರದಾಯ ಕಂಬಳ ಓಟಕ್ಕೆ 700 ವರ್ಷಗಳಷ್ಟು ಇತಿಹಾಸವಿದೆ. ಇದು ಸಂಪ್ರದಾಯ, ಮನರಂಜನೆ ಮತ್ತು ಕ್ರೀಡೆಯ ಸಮ್ಮಿಶ್ರಣವಾಗಿದೆ.
ಹೇಗಿದೆ ಸಿದ್ಧತೆ?
ರಾಜಧಾನಿಯಲ್ಲಿ ಪ್ರಥಮ ಬಾರಿಗೆ ನಡೆಯುತ್ತಿರುವ ಕಂಬಳಕ್ಕೆ ಭರ್ಜರಿಯಾಗಿ ತಯಾರಿ ನಡೆಯುತ್ತಿದೆ. "ತುಳುನಾಡಿನ ಸಂಪ್ರದಾಯವನ್ನು ಇಡೀ ಪ್ರಪಂಚದ ಮುಂದಿಡಲು ಹೊರಟಿದ್ದೇವೆ. ರಾಜ ಮತ್ತು ಮಹಾರಾಜ ಎಂಬ 155ಮೀ ಉದ್ದದ ರೇಸ್ ಟ್ರ್ಯಾಕ್ ಗಳಲ್ಲಿ ಕಂಬಳ ಓಟವನ್ನು ಆಯೋಜಿಸಲಾಗಿದೆ. ಸುಮಾರು 2000 ಸ್ಪರ್ಧಿಗಳು ಕಂಬಳದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ತುಳುನಾಡಿನಿಂದ 15 ಎಮ್ಮೆ ಜೋಡಿಗಳು ಮತ್ತು ರಾಜ್ಯಾದ್ಯಂತ 238 ಎಮ್ಮೆಗಳು ಆಗಮಿಸುತ್ತಿವೆ. ಅವುಗಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸುತ್ತಿದ್ದೇವೆ" ಎಂದು ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಂಬಳ ಸಮಿತಿಯ ಮುಖ್ಯಸ್ಥ ಪ್ರಕಾಶ್ ಶೆಟ್ಟಿ ಮಾತನಾಡಿ, "ನಮ್ಮ ಕಂಬಳ" ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಹೆಮ್ಮೆಯ ವಿಷಯ. ಸರಿಸುಮಾರು 2ರಿಂದ 3 ಲಕ್ಷ ವೀಕ್ಷಕರು ಆಗಮಿಸುವ ನಿರೀಕ್ಷೆ ಇದ್ದು, 150ಕ್ಕೂ ಹೆಚ್ಚು ಆಹಾರ ಮಳಿಗೆಗಳಿಗೆ ಸ್ಥಳ ಕಲ್ಪಿಸಿದ್ದೇವೆ ಎಂದರು.
ಸಿನಿ ತಾರೆಯರ ಆಗಮನ
ತುಳುನಾಡಿನ ಸಿನಿಮಾ ತಾರೆಯರಾದ ಅನುಷ್ಕಾ ಶೆಟ್ಟಿ, ಐಶ್ವರ್ಯಾ ರೈ, ಸಂಗೀತ ನಿರ್ದೇಶಕ ಗುರುಕಿರಣ್ ಸೇರಿದಂತೆ ಹಲವಾರು ಸಿನಿ ತಾರೆಯರನ್ನು, ಗಣ್ಯರನ್ನು ಆಹ್ವಾನಿಸಲಾಗಿದೆ.
ಕಂಬಳದಲ್ಲಿ ಅಪ್ಪು ಮತ್ತು ನಾಲ್ವಡಿ ನೆನಪು
ಕಂಬಳದ ಸಾಮೂಹಿಕ ಕಾರ್ಯಕ್ರಮಗಳಿಗಾಗಿ ಎರಡು ವೇದಿಕೆಗಳನ್ನು ನಿರ್ಮಿಸಲಿದ್ದು, ಮುಖ್ಯ ವೇದಿಕೆಯನ್ನು ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಅವರ ಹೆಸರಲ್ಲಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯನ್ನು ಮೈಸೂರಿನ ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಲ್ಲಿ ನಿರ್ಮಿಸಲಾಗುತ್ತದೆ.