ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಕಡಲ್ಕೊರೆತ ತಡೆ ಮತ್ತು ತಂಗಾಳಿ ಬರಬೇಕೆನ್ನುವ ಉದ್ದೇಶದಿಂದ ಸೋಮೇಶ್ವರ ಕಡಲ ಕಿನಾರೆಯಲ್ಲಿ ನೆಟ್ಟು ಪೋಷಿಸಲಾಗಿದ್ದ ಗಾಳಿ ಮರಗಳಿಂದ ತೊಂದರೆಯಾಗುತ್ತಿದೆ ಎಂದು ಯಾರೋ ನೀಡಿದ ದೂರು ಪರಿಗಣಿಸಿ ಅರಣ್ಯ ಇಲಾಖೆ ಅಧಿಕಾರಿಗಳೇ ಮರಗಳನ್ನು ಕಡಿದಿದ್ದಾರೆ. ಸಮರ್ಪಕವಾಗಿ ಪರಿಶೀಲನೆಯೂ ಮಾಡದೆ ಮರ ಕಡಿದಿರುವುದು ಪರಿಸರ ಪ್ರೇಮಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಕಡಲ್ಕೊರೆತ ತಡೆ ಹಾಗೂ ಗಾಳಿ, ನೆರಳಿಗೆ ಗಾಳಿಮರ ಮತ್ತು ಹೊನ್ನೆಮರಗಳು ಸೂಕ್ತವಾಗಿರುವ ಹಿನ್ನೆಲೆ ಕಡಲ ಕಿನಾರೆಗಳಲ್ಲಿ ಈ ಮರ ಕಾಣಲು ಸಾಧ್ಯ. ಅದರಂತೆ ಹಲವು ವರ್ಷಗಳ ಹಿಂದೆ ಸೋಮೇಶ್ವರ ಕಡಲ ಕಿನಾರೆಯಲ್ಲೂ ಇವೆರಡೂ ಜಾತಿಯ ಮರಗಳು ಹೇರಳವಾಗಿ ಕಾಣಲು ಸಿಗುತ್ತಿದ್ದವು.
ಮರಕಳ್ಳರ ಕಾಟ: ಈ ಭಾಗದಲ್ಲಿ ಮರಕಳ್ಳರ ಕಾಟದಿಂದ ಗಾಳಿ ಮರಗಳು ನಶಿಸುತ್ತಾ ಬಂದಿದ್ದು, ಪ್ರಸ್ತುತ ದಿನಗಳಲ್ಲಿ ಬೆರಳೆಣಿಕೆಯ ಮರಗಳು ಮಾತ್ರ ಸೋಮೇಶ್ವರ ದೇವಸ್ಥಾನದ ಗದಾತೀರ್ಥದ ಸನಿಹದಲ್ಲಿರುವ ಕಡಲ ಕಿನಾರೆಯಲ್ಲಿದ್ದವು. ಆದರೆ ಎರಡು ದಿನಗಳ ಹಿಂದೆ ಇಲ್ಲಿದ್ದ ಬೃಹದಾಕಾರದ ಐದು ಗಾಳಿ ಮರಗಳನ್ನು ಅರಣ್ಯ ಇಲಾಖೆಯವರೇ ಕಡಿದು ನಾಶ ಮಾಡಿದ್ದಾರೆ. ಈ ಬಗ್ಗೆ ಪರಿಸರ ಪ್ರೇಮಿಗಳು ಅಧಿಕಾರಿಗಳನ್ನು ಕೇಳಿದರೆ ಗೊಂದಲಕಾರಿ ಸಬೂಬು ನೀಡಿದ್ದಾರೆ.
ಅಧಿಕಾರಿಗಳು ಹೇಳುವುದೇನು?: ಮರಗಳನ್ನು ಕಡಿದಿರುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿ ರಾಜೇಶ್ ಬಳಿಗಾರ್ ಅವರನ್ನು ಕೇಳಿದರೆ ಮರಗಳು ಅಪಾಯಕಾರಿ ಸ್ಥಿತಿಯಲ್ಲಿದೆ ಎಂದು ಸೋಮೇಶ್ವರ ಪುರಸಭೆಯಿಂದ ಪತ್ರದ ಆಧಾರದಲ್ಲಿ ಕಡಿಸಲಾಗಿದೆ ಎಂದು ತಿಳಿಸುತ್ತಾರೆ. ಅಪಾಯಕಾರಿ ಮರ ತೆರವುಗೊಳಿಸುವಂತೆ ಸ್ಪೀಕರ್ ಅವರೂ ಹಿಂದೆ ನಡೆದಿದ್ದ ಅಧಿಕಾರಿಗಳ ಸಭೆಯಲ್ಲಿ ಹೇಳಿದ್ದರು ಎನ್ನುತ್ತಾರೆ. ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ಮತ್ತಡಿ ಅವರು, ನಾವು ಮರಗಳನ್ನು ಕಡಿದರೆ ಪ್ರಕರಣ ದಾಖಲಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಅಪಾಯಕಾರಿ ಮರದ ಬಗ್ಗೆ ಪತ್ರ ಬರೆದಿದ್ದೆವು. ಆದರೆ ಯಾವ ಮರ ಅಪಾಯಕಾರಿಯಾಗಿದೆ, ಕಡಿಯಬೇಕೇ, ಬೇಡವೇ ಎನ್ನುವ ತೀರ್ಮಾನ ಅರಣ್ಯ ಇಲಾಖೆ ಅಧಿಕಾರಿಗಳು ಕೈಗೊಳ್ಳಬೇಕಿತ್ತು ಎಂದಿದ್ದಾರೆ.
ಬುಡಸಮೇತ ನಾಶ: ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆಬದಿ, ವಸತಿ ಪ್ರದೇಶಗಳಲ್ಲಿರುವ ಮರಗಳು ಬೀಳುವ ಸ್ಥಿತಿಯಲ್ಲಿದ್ದರೆ ಸ್ಥಳೀಯಾಡಳಿತದ ಮನವಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಬಳಿಕ ಮರವನ್ನೇ ಕಡಿಯಬೇಕೇ ಅಥವಾ ರೆಂಬೆಗಳನ್ನು ಮಾತ್ರ ಕಡಿದರೆ ಸಾಕೇ ಎನ್ನುವುದನ್ನು ತೀರ್ಮಾನಿಸಬೇಕಾಗುತ್ತದೆ. ಆದರೆ ಸೋಮೇಶ್ವರ ಕಡಲ ಕಿನಾರೆಯಲ್ಲಿ ಮನೆಗಳೇ ಇಲ್ಲ. ಇರುವುದು ಮೂರು ಪೆಟ್ಟಿಗೆ ಅಂಗಡಿಗಳು ಮಾತ್ರ. ಅದೂ ಅನಧಿಕೃತ. ಅಲ್ಲದೆ ಹಲವು ವರ್ಷಗಳಿಂದ ಮರದಡಿಯಲ್ಲೇ ಅಂಗಡಿ ಇಡಲಾಗಿದೆ. ಅಂಗಡಿ ರಕ್ಷಣೆಗೆ ಮರ ಕಡಿದಿದ್ದರೂ, ರೆಂಬೆಗಳನ್ನು ಮಾತ್ರ ಕಡಿಯಬಹುದಿತ್ತು. ಆದರೆ ಈ ಅಂಗಡಿಗೆ ತಾಗಿಕೊಂಡಿದ್ದ ಹಾಗೂ ಆಸುಪಾಸಿನಲ್ಲಿದ್ದ ಒಟ್ಟು ಐದು ಬೃಹತ್ ಗಾಳಿಮರಗಳನ್ನು ಬುಡಸಮೇತ ಕಡಿದು ಹಾಕಲಾಗಿದೆ.
ಪರಿಶೀಲಿಸದೆ ಕ್ರಮ
ಅಧಿಕಾರಿ ರಾಜೇಶ್ ಬಳಿಗಾರ್ ಅವರಲ್ಲಿ ಮರಗಳನ್ನು ಕಡಿದ ಬಗ್ಗೆ ಪ್ರಶ್ನಿಸಿದ ಬಳಿಕ ಸ್ಥಳಕ್ಕೆ ಅರಣ್ಯ ಇಲಾಖೆ ಇಬ್ಬರು ಸಿಬ್ಬಂದಿ ಭೇಟಿ ನೀಡಿದ್ದಾರೆ. ಸನಿಹದಲ್ಲಿರುವ ಪೆಟ್ಟಿಗೆ ಅಂಗಡಿ ಮಹಿಳೆ ಬಳಿ ಸಿಬ್ಬಂದಿ ಮಾತನಾಡಿದ್ದಾರೆ. ಮರಗಳನ್ನು ಕಡಿಯುವ ಸಂದರ್ಭ ನಮ್ಮಲ್ಲಿ ಯಾರೂ ಮಾತನಾಡಿಲ್ಲ. ಕಡಿದಿದ್ದು ಒಳ್ಳೆಯದಾಯಿತು ಎಂದು ತಿಳಿಸಿದ್ದಾರೆ. ಇದೆಲ್ಲವನ್ನೂ ಗಮನಿಸಿದಾಗ ಯಾರದ್ದೋ ಒತ್ತಡಕ್ಕೆ ಅಧಿಕಾರಿಗಳು ಸರಿಯಾಗಿ ಪರಿಶೀಲನೆಯನ್ನೇ ನಡೆಸದೆ ಮರ ಕಡಿದಿರುವುದು ಕಂಡು ಬಂದಿದ್ದು ಅರಣ್ಯ ರಕ್ಷಕರೇ ಭಕ್ಷಕರಾಗಿದ್ದಾರೆನ್ನುವ ಆಕ್ರೋಶ ಪರಿಸರ ಪ್ರೇಮಿಗಳಿಂದ ವ್ಯಕ್ತವಾಗಿದೆ.
ಗಾಳಿ ಮತ್ತು ಹೊನ್ನೆಮರ ಕಡಲ್ಕೊರೆತ ತಡೆಗೆ ಸೂಕ್ತ ಮರಗಳಾಗಿದ್ದರಿಂದ ರಕ್ಷಿಸುವ ಅವಶ್ಯಕತೆಯಿದೆ. ಯಾವುದೇ ಮರಗಳು ಅಪಾಯಕಾರಿಯಾಗಿದ್ದು ಕಡಿಯಲೇಬೇಕೆಂದಿದ್ದರೆ ಅರಣ್ಯ ಇಲಾಖೆ ಸ್ಥಳೀಯ ಅಧಿಕಾರಿಗಳು ಮೇಲಾಧಿಕಾರಿಗಳ ಗಮನಕ್ಕೆ ತಂದು ಸರಿಯಾಗಿ ಪರಿಶೀಲನೆ ನಡೆಸಿದ ಬಳಿಕ ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಮಾಧವ ಉಳ್ಳಾಲ್ ಪರಿಸರ ಪ್ರೇಮಿ ಸೋಮೇಶ್ವರ ಕಡಲ ಕಿನಾರೆಯಲ್ಲಿ ಏಳೆಂಟು ಗಾಳಿ ಮರಗಳು ಮಾತ್ರ ಇದ್ದವು, ಈಗ ಐದು ಮರಗಳನ್ನು ಕಡಿಯಲಾಗಿದ್ದು, ಗಾಳಿಯೂ ಇಲ್ಲದಂತಾಗಿದೆ. ಮರ ಕಡಿದ ಬಳಿಕ ಏನೂ ಮಾಡಲಾಗದು, ಆದರೆ ಅದಕ್ಕೆ ಪರಿಹಾರದ ರೂಪದಲ್ಲಿ ಮತ್ತದೇ ಜಾಗ ಹಾಗೂ ಆಸುಪಾಸಿನಲ್ಲಿ ಗುಣಮಟ್ಟದ ಗಿಡಗಳನ್ನು ನೆಡಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಲಿ. ದಿನೇಶ್ ನಡಾರ್ ಪರಿಸರ ಪ್ರೇಮಿ