ಕರಾವಳಿ ಉತ್ತರ ಭಾಗದ ಜನರಿಗೆ ಕಂಬಳಕ್ಕೆ ಕೋಣಗಳನ್ನು ಓಡಿಸುವ ತರಬೇತಿಗಾಗಿ ಕಂಬಳ ಕರೆ ನಿರ್ಮಾಣ ಮಾಡಿದ್ದಾರೆ 
ಜಿಲ್ಲೆ

ಪರಂಪರೆ ಉಳಿವಿಗೆ ಕರೆ ನಿರ್ಮಾಣ

ಇಂದಿರಾ ಎನ್ ಕೆ

ಬಂಡೀಮಠ ಶಿವರಾಮ ಆಚಾರ್ಯ

ಬಾರಕೂರು ಬಳಿಯ ಯಡ್ತಾಡಿಯಲ್ಲಿ ದಿ.ನಟ ಸುನೀಲ್ ಅವರ ಮನೆ ಆವರಣದಲ್ಲಿ 30 ವರ್ಷದಿಂದ ಪ್ರತಿದಿನ ಕಂಬಳ ನಡೆಯುತ್ತಿದ್ದು, ಸುನೀಲ್ ಅವರ ಅಕ್ಕನ ಗಂಡ ಬಾರಕೂರು ಶಾಂತಾರಾಮ ಶೆಟ್ಟಿಯವರು ಕರಾವಳಿ ಉತ್ತರ ಭಾಗದ ಜನರಿಗೆ ಕಂಬಳಕ್ಕೆ ಕೋಣಗಳನ್ನು ಓಡಿಸುವ ತರಬೇತಿಗಾಗಿ ಕಂಬಳ ಕರೆ ನಿರ್ಮಾಣ ಮಾಡಿದ್ದಾರೆ.

ತುಳುನಾಡಿನ ಜಾನಪದ ಮತ್ತು ನಂಬಿಕೆ, ಹರಕೆಯ, ದೇವರ, ಜನ್ನ ಜೋಡುಕರೆ ಕಂಬಳ ಇಂದು ಬೆಂಗಳೂರು ಸೇರಿ ರಾಜ್ಯದ ನಾನಾ ಭಾಗದಲ್ಲಿ ಪ್ರಸಿದ್ಧಿ ಪಡೆಯಲು ಬೇಕಾದ ಸೂಕ್ತ ತರಬೇತಿ ಹಾಗು ಕಂಬಳ ಪರಂಪರೆ ಉಳಿವಿಗಾಗಿ ಲಕ್ಷಾಂತರ ರೂ. ವೆಚ್ಚದಲ್ಲಿ ಕಂಬಳ ಕರೆ ನಿರ್ಮಾಣ ಮಾಡಿದ್ದಾರೆ.

ಕಂಬಳ ಕರೆಯಲ್ಲಿ ಓಟಕ್ಕೆ ಬೇಕಾಗುವಷ್ಟು ನೀರು ಪೂರೈಕೆಗೆ 3 ಪಂಪ್ ಸೆಟ್, ಓಟದ ಬಳಿಕ ಕೋಣಗಳು ಮತ್ತು ಓಟಗಾರರಿಗೆ ಸ್ನಾನಕ್ಕೆ ಕೋಣಗಳ ಬೆನ್ನಿಗೆ ನೀರು ಹಾಕಲು ಬೇಕಾಗುವಷ್ಟು ಸಿಹಿನೀರು, ಸುತ್ತಲೂ ತಂಪಾದ ನೆರಳಿನ ವಾತಾವರಣ ಇದ್ದು, ಪ್ರತಿದಿನ ಇಲ್ಲಿ ಕಂಬಳದ ಸೊಬಗು ಕಾಣಬಹುದು.

135 ಮೀಟರ್ ಉದ್ದ 6 ಮೀಟರ್ ಅಗಲದಲ್ಲಿ ಇರುವ ಕಂಬಳ ಕರೆ ಜೋಡು ಕರೆ ಕಂಬಳಕ್ಕೆ ಬೇಕಾಗುವ ಅಳತೆಯಲ್ಲಿ ರಚನೆ ಮಾಡಲಾಗಿದೆ. ಪ್ರತಿದಿನ ಇಲ್ಲಿಗೆ ನಾನಾ ಭಾಗದ ಕಂಬಳದ ಕೋಣಗಳ ಓಟದ ತರಬೇತಿಗೆ ಬಂದು ಕಂಬಳಕ್ಕೆ ಸಿದ್ಧಗೊಳ್ಳುವಂತೆ ಕೋಣಗಳ ಸಿಂಗಾರ ಮಾಡಿ ಕಂಬಳಕರೆಯಲ್ಲಿ ಓಟಗಾರರಿಂದ ಓಟ ನಡೆಯುತ್ತದೆ.

ತರಬೇತಿಗೆ ಬಂದಾಗ ಕೋಣಗಳ ಜತೆಗೆ ಬರುವ ಓಟಗಾರ ಮತ್ತು ಕೋಣಗಳನ್ನು ತರುವ ವಾಹನ ಚಾಲಕರು ಇನ್ನಿತರ ಸಹಾಯಕರ ದಣಿವು ಆರಿಸಿಕೊಳ್ಳುಲು ಕುಡಿಯುವ ನೀರು ಮಧ್ಯಾಹ್ನ ಗಂಜಿ ಊಟ ಕಂಬಳಕರೆ ಮನೆಯವರಿಂದ ಉಚಿತವಾಗಿರುತ್ತದೆ.

ಹಲವಾರು ವರ್ಷದಿಂದ ಕಂಬಳದಲ್ಲಿ ಭಾಗವಹಿಸಿ ಅನೇಕ ಬಹುಮಾನ ಪಡೆದ ನನಗೆ ಕಂಬಳದ ಗುರಿಕಾರ ನೆಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಗೌರವ ಬಂದಿದೆ. ಅದಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಕರೆ ಮಾಡಿದ್ದು ಅನೇಕರಿಗೆ ಉಪಯುಕ್ತವಾಗಿದೆ ಇದೇ ಒಂದು ಆತ್ಮ ಸಂತೋಷ.-ಬಾರಕೂರು ಶಾಂತಾರಾಮ ಶೆಟ್ಟಿ, ಕಂಬಳ ಕರೆ ನಿರ್ಮಾಣಕಾರರು
ನಾನು ಪ್ರತಿ ಭಾನುವಾರ ಇಲ್ಲಿ ಕೋಣಗಳ ತರಬೇತಿಗೆ ಬರುತ್ತೇನೆ. ಕೋಣಗಳ ಓಟದ ತಯಾರಿಗೆ ಇಂತಹಃ ಒಂದು ಕರೆ ಇರುವುದರಿಂದ ನಾನು ಅನೇಕ ಬಹುಮಾನ ಪಡೆಯುವಂತೆ ಆಗಿದೆ.-ಸುಧಾಕರ ನಾಯ್ಕ ಕೂಡ್ಲಿ, ಕಂಬಳ ಕೋಣಗಳ ಓಟಗಾರ