ಜಿಲ್ಲೆ

ಡ್ರೋನ್‌ನಲ್ಲಿ ಕೀಟನಾಶಕ ಸಿಂಪಡಿಸುವ ಸಕೀನಾ

ಸೌಮ್ಯ ಆರ್

ಮುಳ್ಳೇರಿಯ: ಕೃಷಿ ಬೆಳೆ ನಿರ್ವಹಣೆಯಲ್ಲಿ ಕೀಟನಾಶಕ ಸಿಂಪಡಿಸುವ ಮಹತ್ವ ಬಹಳಷ್ಟಿದ್ದರೂ ಕಾರ್ಮಿಕರ ಕೊರತೆ ಕೃಷಿ ವಲಯವನ್ನೇ ಬಿಕ್ಕಟ್ಟಿಗೆ ಸಿಲುಕಿಸುತ್ತಿದೆ. ಇದಕ್ಕೆ ಪರಿಹಾರವಾಗಿ ಕುಟುಂಬಶ್ರೀ ಡ್ರೋನ್ ಪೈಲಟ್ ತರಬೇತಿ ನೀಡಿ ರೈತರಿಗೆ ಸಹಾಯ ಮಾಡುತ್ತಿದೆ.

ಮುಳಿಯಾರ್ ಪಂಚಾಯಿತಿಯ ಪೊವ್ವಲ್ ಮೂಲದ ಸಕೀನಾ ಎನ್ನುವ ಮಹಿಳೆ ಡ್ರೋನ್ ತರಬೇತಿ ಪಡೆದಿದ್ದು ಕುಟುಂಬಶ್ರೀ ರಾಜ್ಯ ಮಿಷನ್ ಸಹಯೋಗದೊಂದಿಗೆ ಚೆನ್ನೈ ಮತ್ತು ತಿರುವನಂತಪುರಂನಲ್ಲಿ ತರಬೇತಿ ಪೂರ್ಣಗೊಳಿಸಿದ ಸಕೀನಾ ಅವರಿಗೆ ಕುಟುಂಬಶ್ರೀ ಡ್ರೋನ್ ಪೈಲಟ್ ಪರವಾನಗಿಯನ್ನು ಉಚಿತವಾಗಿ ನೀಡಲಾಗಿದೆ. ಹೆಚ್ಚುವರಿಯಾಗಿ, ಕುಟುಂಬಶ್ರೀ 10 ಲಕ್ಷ ರೂ. ಮೌಲ್ಯದ ಡ್ರೋನ್ ಒದಗಿಸಿದೆ.

ಸ್ಥಳೀಯ ಸರ್ಕಾರಿ ಸಂಸ್ಥೆಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುವ ಸಕೀನಾ, ರಜೆಯ ದಿನಗಳಲ್ಲಿ ತನ್ನ ಸೇವೆ ಅಗತ್ಯವಿರುವ ರೈತರಲ್ಲಿಗೆ ತೆರಳಿ ಕೀಟನಾಶಕ ಸಿಂಪಡಿಸುತ್ತಾರೆ. ಭತ್ತ ಬೆಳೆಯುವ ಋತುವಿನಲ್ಲಿ, ಸಕೀನಾ ಕೀಟನಾಶಕಗಳನ್ನು ಸಿಂಪಡಿಸುವ ಮೂಲಕ ಉತ್ತಮ ಆದಾಯವನ್ನು ಗಳಿಸುತ್ತಾರೆ.

ಸಕೀನಾ ಅವರಲ್ಲದೆ, ಬೇಡಡ್ಕ ಪಂಚಾಯಿತಿಯ ನೀತು, ಚೆಮ್ಮನಾಡ್ ಪಂಚಾಯಿತಿಯ ಶ್ರುತಿ, ಪನತ್ತಡಿ ಪಂಚಾಯಿತಿಯ ಶ್ರುತಿ, ಚೆಮ್ಮನಾಡ್ ಪಂಚಾಯಿತಿಯ ಜಿಜಿ, ಪಳ್ಳಿಕ್ಕೆರೆ ಪಂಚಾಯಿತಿಯ ರಜನಿ, ಅಜಾನೂರು ಪಂಚಾಯಿತಿಯ ಸಿಲ್ನಾ ಮತ್ತು ಇತರರು ಡ್ರೋನ್ ಬಳಸುತ್ತಿದ್ದಾರೆ.