ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ದಂಡದಲ್ಲಿ ಶೇ.50 ರಿಯಾಯಿತಿ ಪಡೆಯಲು ಜನರು ಸ್ವಯಂಪ್ರೇರಿತವಾಗಿ ಪಾವತಿ ಮಾಡುತ್ತಿರುವ ದಂಡ ಸಂಗ್ರಹದಲ್ಲಿ ಬುಧವಾರ ಕೊಂಚ ಇಳಿಮುಖವಾಗಿದೆ. ಅದಾಗ್ಯೂ ಕಳೆದ ಆರು ದಿನಗಳಲ್ಲಿ ಒಟ್ಟಾರೆ ದಂಡ ಸಂಗ್ರಹ 50 ಕೋಟಿ ರೂ. ಗಡಿದಾಡಿದೆ.
ಸಾರಿಗೆ ಇಲಾಖೆ ನೀಡಿರುವ ಟ್ರಾಫಿಕ್ ಫೈನ್‌ನಲ್ಲಿ ಶೇ.50 ರಿಯಾಯಿತಿ ಸದುಪಯೋಗ ಪಡಿಸಿಕೊಳ್ಳುವ ಸಲುವಾಗಿ ಜನರು ಸ್ವಯಂಪ್ರೇರಿತವಾಗಿ ದಂಡ ಪಾವತಿಸುತ್ತಿದ್ದಾರೆ. ಬುಧವಾರ ಸಹ ಸ್ಥಳೀಯ ಠಾಣೆಗಳಿಗೆ ಜನರೇ ಖುದ್ದು ಹಾಜರಾಗಿ ತಮ್ಮ ವಾಹನಗಳ ಮೇಲೆ ವಿಧಿಸಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಕ್ಕೆ ದಂಡ ಪಾವತಿಸಿದರು. ಅದೇ ರೀತಿ ಆನ್‌ಲೈನ್ ಸೇವೆ, ಕರ್ನಾಟಕ ಒನ್, ಬೆಂಗಳೂರು ಒನ್‌ನಲ್ಲಿ ದಂಡ ಪಾವತಿಸಿದ ದೃಶ್ಯ ಕಂಡು ಬಂತು.
ಬುಧವಾರ 9.06 ಕೋಟಿ ರೂ. ದಂಡ ವಸೂಲಿಯಾಗಿದೆ. ಫೆ.7ರ ಮಂಗಳವಾರ 9.7 ಕೋಟಿ ರೂ. ಸಂಗ್ರಹವಾಗಿತ್ತು. ನಿರೀಕ್ಷೆಗೂ ಮೀರಿ ಜನರಿಂದ ಸ್ಪಂದನೆ ಸಿಗುತ್ತಿದೆ. ಫೆ.11ರ ವರೆಗೂ ಇದೇ ರೀತಿ ಸಾರ್ವಜನಿಕರು ಸರ್ಕಾರದ ಸೌಲಭ್ಯ ಬಳಸಿಕೊಳ್ಳಬೇಕೆಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಫೆ.11ರ ಆನಂತರವೂ ಶೇ.50 ರಿಯಾಯಿತಿ ಸೌಲಭ್ಯ ವಿಸ್ತರಿಸುವ ಪ್ರಸ್ತಾಪ ಪೊಲೀಸ್ ಇಲಾಖೆ ಮುಂದೆ ಇಲ್ಲ. ಇದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಸಾರಿಗೆ ಇಲಾಖೆ ಇದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಅವಧಿ ವಿಸ್ತರಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಅಧಿಕಾರ ಇಲ್ಲವೆಂದು ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.