ಬಂಟ್ವಾಳ: ಪೊಳಲಿ(ಅಡ್ಡೂರು) ಸೇತುವೆಯಲ್ಲಿ ಭಾರಿ ವಾಹನಗಳ ಸಂಚಾರ ನಿರ್ಬಂಧಿಸಿರುವ ಹಿನ್ನೆಲೆಯಲ್ಲಿ ತೊಂದರೆಗೊಳಗಾದ ಪೊಳಲಿ ಸುತ್ತಮುತ್ತಲಿನ ಗ್ರಾಮಸ್ಥರು ಸೋಮವಾರ ಪೊಳಲಿ ಸರ್ವಮಂಗಳ ಸಭಾಭವನದಲ್ಲಿ ಸಭೆ ಸೇರಿ ಮುಂದಿನ ನಡೆಯ ಬಗ್ಗೆ ಚರ್ಚೆ ನಡೆಸಿದರು.
ತಾಲೂಕಿನ ಕರಿಯಂಗಳ, ಬಡಗ ಬೆಳ್ಳೂರು, ಅಮ್ಮುಂಜೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನಾಗರಿಕರು, ವಿವಿಧ ಸಂಘ-ಸಂಸ್ಥೆಯ ಪ್ರತಿನಿಧಿಗಳು ಹಾಗೂ ವಿವಿಧ ಸ್ತರದ ಜನಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದರು.
ಸಮಿತಿಯ ಗೌರವ ಸಲಹೆಗಾರರಾಗಿ ಬಾಲಕೃಷ್ಣ ರಾವ್ ನೂಯಿ, ಅಧ್ಯಕ್ಷರಾಗಿ ವೆಂಕಟೇಶ್ ನಾವಡ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಚಂದ್ರಹಾಸ್ ಪಲ್ಲಿಪಾಡಿ, ಉಪಾಧ್ಯಕ್ಷರಾಗಿ ಜಯರಾಮಕೃಷ್ಣ, ಅಬೂಬಕ್ಕರ್ ಅಮ್ಮುಂಜೆ, ಸಂದೀಪ್ ಕಮ್ಮಾಜೆ, ಚಂದ್ರಶೇಖರ ಭಂಡಾರಿ, ಶಶಿಕಿರಣ್, ಕೋಶಾಧಿಕಾರಿಯಾಗಿ ಕಿಶೋರ್ ಪಲ್ಲಿಪಾಡಿ, ಸಂಚಾಲಕರಾಗಿ ಚಂದ್ರಶೇಖರ ಶೆಟ್ಟಿ ಬಡಕಬೈಲ್ ಹಾಗೂ ಮಹಿಳಾ ಪ್ರಮುಖರಾಗಿ ಮಮತಾ ಬಡಗಬೆಳ್ಳೂರು, ಚಂದ್ರಾವತಿ ಪೊಳಲಿ, ವೀಣಾ ಆಚಾರ್ಯ ಕರಿಯಂಗಳ ಆಯ್ಕೆಗೊಂಡರು.
ಸಮಾಲೋಚನಾ ಸಭೆಯಲ್ಲಿ ವೆಂಕಟೇಶ್ ನಾವಡ, ನೂಯಿ ಬಾಲಕೃಷ್ಣ ರಾವ್, ಚಂದ್ರಹಾಸ ಪಲ್ಲಿಪಾಡಿ, ಕರಿಯಂಗಳ ಗ್ರಾ.ಪಂ ಅಧ್ಯಕ್ಷೆ ರಾಧಾ ಲೋಕೇಶ್, ಬಡಗಬೆಳ್ಳೂರು ಗ್ರಾ.ಪಂ ಅಧ್ಯಕ್ಷೆ ರೂಪ, ಅಮ್ಮುಂಜೆ ಗ್ರಾ.ಪ ಉಪಾಧ್ಯಕ್ಷ ರಾಧಾಕ್ರಷ್ಣ ತಂತ್ರಿ, ಕರಿಯಂಗಳ ಗ್ರಾ.ಪಂ ಉಪಾಧ್ಯಕ್ಷ ರಾಜು ಕೋಟ್ಯಾನ್ ಗರೋಡಿ, ಬಸ್ ಮಾಲೀಕ ಶಿವಪ್ರಸಾದ್ ಶೆಟ್ಟಿ, ರೂಪಶ್ರೀ, ನಾರಾಯಣ ನಾಯ್ಕ, ಶಶಿಕಿರಣ್ ಉಪಸ್ಥಿತರಿದ್ದರು. ಸುಬ್ರಾಯ ಕಾರಂತ ಸ್ವಾಗತಿಸಿ, ವಂದಿಸಿದರು.
ಸ್ಥಳಕ್ಕೆ ಪರೀಕ್ಷೆಗಾಗಿ ಯಂತ್ರ ಬಂದಿದ್ದು, ಇದರ ವರದಿಯ ನಂತರ ಜಿಲ್ಲಾಧಿಕಾರಿ ಯಾವ ಕ್ರಮ ತೆಗೆದುಕೊಳ್ಳುತ್ತಾರೆ? ಒಂದು ವೇಳೆ ಸೇತುವೆ ದುರಸ್ತಿ ನಡೆದರೆ ಜನರ ಹಾಗೂ ವಾಹನಗಳ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಏನು? ಎಂಬ ಬಗ್ಗೆ ಚರ್ಚೆ ಮಾಡಲಾಯಿತು. ಸಭೆಯಲ್ಲಿ ಪೊಳಲಿ-ಅಡ್ಡೂರು ಸೇತುವೆ ಹೋರಾಟ ಸಮಿತಿ ಹೆಸರಿನಲ್ಲಿ ಸಮಿತಿಯೊಂದನ್ನು ಕೂಡ ರಚನೆ ಮಾಡಲಾಯಿತು.
ಸಭೆಯಲ್ಲಿ ಅನೇಕ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದ್ದು, ಮುಂದಿನ ನಡೆಯ ಬಗ್ಗೆಯೂ ಚರ್ಚಿಸಲಾಯಿತು. ಅಡ್ಡೂರು ಸೇತುವೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಿದರಿಂದ ಬಸ್, ಶಾಲಾ ಮಕ್ಕಳು, ಭಕ್ತರಿಗೆ ತೊಂದರೆಯಾಗುತ್ತಿದ್ದು, ಈ ಕುರಿತು ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಮುಂದಕ್ಕೆ ಪ್ರತಿಭಟನೆ ಮಾಡುವ ಬಗ್ಗೆಯೂ ಚರ್ಚೆಯಾಗಿದೆ.