ಜಿಲ್ಲೆ

ಸಾಂಪ್ರದಾಯಿಕ ಆಟ, ಮಾತೃಭಾಷಾ ಪರಿಚಯ

Avinash R

ವಿಜಯವಾಣಿ ಸುದ್ದಿಜಾಲ ಉಳ್ಳಾಲ ಆಧುನಿಕತೆ ಭರಾಟೆಯಲ್ಲಿ ಮಕ್ಕಳು ಮೂಲ ಸಂಸ್ಕೃತಿ, ಸಂಸ್ಕಾರಗಳಿಂದ ವಿಮುಖರಾಗುತ್ತಿದ್ದಾರೆ. ತುಳುನಾಡಿನ ಸಾಂಪ್ರದಾಯಿಕ ಆಟಗಳು ಮರೆಯಾಗುತ್ತಿವೆ. ಸಾಂಪ್ರದಾಯಿಕ ಆಟಗಳನ್ನು ಇಂದಿನ ಮಕ್ಕಳಿಗೆ ಪರಿಚಯಿಸುವ ಜತೆಗೆ ಸಾಧ್ಯವಾದಷ್ಟು ತುಳು ಭಾಷೆಯಲ್ಲೇ ಮಾತನಾಡಿ ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ ಎಂದು ಮಂಗಳೂರು ಸರ್ಕಾರಿ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರೊ.ರಾಧಾಕೃಷ್ಣ ಕೆ. ಹೇಳಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಪಿಲಾರು ಯುವಕ ಮಂಡಲ ಆಶ್ರಯದಲ್ಲಿ ಪಿಲಾರ್ ಪಂಜಂದಾಯ ದೈವ ಸನ್ನಿಧಿ ಮೈದಾನದಲ್ಲಿ ಭಾನುವಾರ ತುಳು ಪರ್ಬ ಉದ್ಘಾಟಿಸಿ ಮಾತನಾಡಿದರು. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪಾರ್ದನಗಾರ್ತಿ ಕುತ್ತಾರ್ ತಿಮ್ಮಕ್ಕ ಅವರನ್ನು ಸನ್ಮಾನಿಸಲಾಯಿತು. ಅಕಾಡೆಮಿ ಸದಸ್ಯ ಬಾಬು ಪಾಂಗಳ, ಸೋಮೇಶ್ವರ ಪುರಸಭಾ ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ, ಸದಸ್ಯ ಪುರುಷೋತ್ತಮ ಶೆಟ್ಟಿ, ಚೆಂಬುಗುಡ್ಡೆ ಜುಮಾ ಮಸೀದಿ ಅಧ್ಯಕ್ಷ ಇಮ್ತಿಯಾಜ್ ಪಿಲಾರ್, ನಿವೃತ್ತ ಆಹಾರ ನಿರೀಕ್ಷಕ ಚಂದ್ರಶೇಖರ ಗಟ್ಟಿ ಮಜಲ್, ಉದ್ಯಮಿ ಚಂದ್ರಹಾಸ್, ಪಿಲಾರು ಯುವಕ ಮಂಡಲ ಅಧ್ಯಕ್ಷ ಯಶವಂತ ಶೆಟ್ಟಿ, ಗೌರವಾಧ್ಯಕ್ಷ ಗಜಾನಂದ ಗಟ್ಟಿ, ಕೋಶಾಧಿಕಾರಿ ನವೀನ್ ಸಾಲಿಯಾನ್, ಪ್ರಧಾನ ಕಾರ್ಯದರ್ಶಿ ಧನರಾಜ್, ಸದಸ್ಯರಾದ ಶ್ರೀಧರ ಆಳ್ವ ಪಿಲಾರು, ಜಿತೇಶ್ ಗಟ್ಟಿ ಪಿಲಾರು, ನವೀನ್ ಗಟ್ಟಿ ಪಿಲಾರು, ಅರುಣ್ ಗಟ್ಟಿ ಮಜಲ್ ಮೊದಲಾದವರು ಉಪಸ್ಥಿತರಿದ್ದರು. ರೇಡಿಯೋ ಸಾರಂಗ್‌ನ ಎಡ್ವರ್ಡ್ ಡಿಸೋಜ ಸ್ವಾಗತಿಸಿದರು. ರಜನೀಶ್ ವಂದಿಸಿದರು.

ನಮ್ಮ ಹಿರಿಯರಿಗೆ ಶಿಕ್ಷಣ ಇಲ್ಲದಿದ್ದರೂ ಮಸ್ತಕದಲ್ಲೇ ತುಂಬಿಕೊಂಡಿದ್ದ ಪಾರ್ದನ ಗಂಟೆಗಟ್ಟಲೆ ನಿರರ್ಗಳವಾಗಿ ಹೇಳುತ್ತಿದ್ದರು. ತುಳುನಾಡಿನದ್ದೇ ನೂರಕ್ಕೂ ಹೆಚ್ಚು ಪಾರ್ದನಗಳಿದ್ದು, ಜ್ಞಾನ ಭಂಡಾರದ ಪರಂಪರೆ ಮಹತ್ವದ್ದಾಗಿದೆ. ತುಳು ಭಾಷೆ ಪೋಷಿಸುವ ಕೆಲಸ ಇನ್ನಷ್ಟು ಮಾಡಬೇಕಿದೆ. ತಾರನಾಥ ಗಟ್ಟಿ ಕಾಪಿಕಾಡ್, ಅಧ್ಯಕ್ಷರು, ತುಳು ಸಾಹಿತ್ಯ ಅಕಾಡೆಮಿ ಪಂಚದ್ರಾವಿಡ ಭಾಷೆಗಳಲ್ಲಿ ತುಳು ಅತ್ಯಂತ ಸುಂದರ ಭಾಷೆಯಾಗಿದೆ. ಈ ಭಾಷೆಗೆ ಲಿಪಿ ದೊರಕಿದ್ದು, ಸರ್ಕಾರವೂ ಸಾಹಿತ್ಯ ಅಕಾಡೆಮಿ ಭಾಷೆಗೆ ಪ್ರಾಮುಖ್ಯತೆ ನೀಡುತ್ತಿದೆ. ಆಧುನಿಕ ಯುಗದಲ್ಲಿ ನಮ್ಮ ಸಂಸ್ಕೃತಿ, ಸಂಸ್ಕಾರಗಳನ್ನು ಮರೆತ ಪರಿಣಾಮ ಪ್ರಕೃತಿ ವಿಕೃತಿಯಾಗಿ ಪರಿಣಮಿಸುತ್ತಿದೆ. ತುಳು ಭಾಷೆ, ಜನಪದ ಸಂಸ್ಕೃತಿ ಬಗ್ಗೆ ಮತ್ತಷ್ಟು ಅನ್ವೇಷಣೆಗಳು ನಡೆದು ಕಲೆ, ಸಂಸ್ಕೃತಿ ಉಳಿಸಿ ಬೆಳೆಸುವ ಅವಶ್ಯಕತೆಯಿದೆ. ಪ್ರೊ.ರಾಧಾಕೃಷ್ಣ ಕೆ., ಮಂಗಳೂರು ಸರ್ಕಾರಿ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ