ಸಿಂಧನೂರು: ತಾಲೂಕಿನ ಎಸ್‌ಎನ್‌ಕ್ಯಾಂಪ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಹಳ್ಳಿ ಸೊಬಗು ವಿಶೇಷ ಕಾರ್ಯಕ್ರಮ ಸೋಮವಾರ ಸಂಭ್ರಮದಿಂದ ನಡೆಯಿತು.
ವಿದ್ಯಾರ್ಥಿನಿಯರು ಸೀರೆ ತೊಟ್ಟರೆ, ವಿದ್ಯಾರ್ಥಿಗಳು ಪಂಚೆ, ಲುಂಗಿ, ತಲೆಗೆ ರುಮಾಲು ಧರಿಸಿ ಗ್ರಾಮೀಣ ಸೊಗಡಿನಲ್ಲಿ ಗಮನ ಸೆಳೆದರು. ಸಂತೆ ಮಾರುಕಟ್ಟೆಯಲ್ಲಿ ಧಾನ್ಯಗಳ ಮಾರಾಟ ಮಾಡುವ ಬಗೆ, ಕಟ್ಟಿಗೆ ಕಡಿಯುವುದು, ಬಟ್ಟೆ ಶುಭ್ರಗೊಳಿಸುವ ವಿಧಾನ ಸೇರಿ ಹಳ್ಳಿಯ ಹಲವು ಕರಕುಶಲಗಳ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು.
ಹಳ್ಳಿ ಸೊಬಗು ಕಾರ್ಯಕ್ರಮದ ನಿಮಿತ್ತ ಬೆಳಗ್ಗೆಯಿಂದಲೇ ವಿದ್ಯಾರ್ಥಿಗಳು ತರಹೇವಾರಿ ಪೋಷಾಕು ತೊಟ್ಟು ಶಾಲಾ ಆವರಣದಲ್ಲಿ ಸಂಭ್ರಮಿಸಿದರು. ಶಾಲಾ ಮುಖ್ಯಶಿಕ್ಷಕ ಲಕ್ಷ್ಮಣ ಹಳ್ಳಿ ಸೊಬಗಿನ ಮಹತ್ವ ತಿಳಿಸಿಕೊಟ್ಟರು. ಎಸ್ಡಿಎಂಸಿ ಅಧ್ಯಕ್ಷ ಚನ್ನಪ್ಪ, ಅತಿಥಿ ಶಿಕ್ಷಕ ನಿರುಪಾದೆಪ್ಪ ಹಸಮಕಲ್ ಇದ್ದರು.