ಹುಬ್ಬಳ್ಳಿ: ಪಂಕ್ಚರ್ ಆಗಿ ರಸ್ತೆ ಬದಿ ನಿಂತಿದ್ದ ಟ್ರ್ಯಾಕ್ಟರ್‌ಗೆ, ಹಿಂಬದಿಯಿಂದ ಟ್ಯಾಂಕರ್ ಡಿಕ್ಕಿ ಹೊಡೆದಿರುವ ಘಟನೆ ಹುಬ್ಬಳ್ಳಿ ಸಮೀಪದ ಬುಡರಸಿಂಗಿ ಕ್ರಾಸ್ ಬಳಿ ನಡೆದಿದೆ.
ಘಟನೆಯಲ್ಲಿ ಟ್ರ್ಯಾಕ್ಟರ್ ಹಿಂಬದಿ ನಿಂತಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕಲ್ಮೇಶ ಯಂಕಮ್ಮನವರ (26) ಹಾಗೂ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಅಡವಿಸೋಮಾಪುರದ ಕಲ್ಮೇಶ ಜಾಧವ (26) ಎಂದು ಗುರುತಿಸಲಾಗಿದೆ.
ಮುಂಡಗೋಡದ ವಿನಾಯಕ ಮಾನಾಬಾಯಿ ಎಂಬಾತನಿಗೆ ಗಾಯಗಳಾಗಿದ್ದು, ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಟ್ರ್ಯಾಕ್ಟರ್ ಪಂಕ್ಚರ್ ಆಗಿದ್ದರಿಂದ ರಸ್ತೆ ಬದಿ ನಿಲ್ಲಿಸಿದ್ದರು ಎನ್ನಲಾಗಿದೆ. ಈ ವೇಳೆ ಮಹಾರಾಷ್ಟ್ರದ ಬಾವುಸಾಹೇಬ ಡಾಕನೆ ಎಂಬಾತ ಟ್ಯಾಂಕರ್ ಚಲಾಯಿಸಿಕೊಂಡು ಹಾವೇರಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಬರುತ್ತಿದ್ದ. ಟ್ಯಾಂಕರ್ ಮೇಲಿನ ನಿಯಂತ್ರಣ ಕಳೆದುಕೊಂಡ ಚಾಲಕ ರಸ್ತೆಬದಿ ನಿಂತಿದ್ದ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದಿದ್ದಾನೆ.
ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.