ಕಡಬ: ಕಡಬ ಸಮುದಾಯ ಆರೋಗ್ಯ ಕೇಂದ್ರದ ಶೌಚಗೃಹದ ಗುಂಡಿ ತುಂಬಿ ಅದರಿಂದ ಹೊರಬಂದ ನೀರು ತಮ್ಮ ಮನೆಯಂಗಳದ ಮೂಲಕ ಹರಿಯುತ್ತಿದ್ದು, ಕುಡಿಯುವ ನೀರಿನ ಬಾವಿಗೆ ಆ ಕೊಳಕು ನೀರು ಸೇರಿಕೊಳ್ಳುವ ಭೀತಿ ಇದೆ ಎಂದು ಸ್ಥಳೀಯ ನಿವಾಸಿ ಉಮೇಶ್ ನಾಕ್ ಹೊಸಮನೆ ಎಂಬುವರು ಕಡಬ ಪಟ್ಟಣ ಪಂಚಾಯಿತಿಗೆ ದೂರು ನೀಡಿದ್ದಾರೆ.
ಕಡಬ ಸಮುದಾಯ ಆಸ್ಪತ್ರೆಯ ಬಳಿಯಿಂದ ಹಾದುಬರುವ ಚರಂಡಿಯಲ್ಲಿ ಮಳೆಗಾಲದಲ್ಲಿ ಮಳೆನೀರು ಹರಿದು ಮನೆಯ ಅಂಗಳಕ್ಕೆ ತಾಗಿಕೊಂಡಿರುವ ತೋಡಿನಲ್ಲಿ ಹರಿಯುತ್ತದೆ. ಕಳೆದ ಕೆಲವು ಸಮಯದಿಂದ ಅದೇ ತೋಡಿನಲ್ಲಿ ಕಡಬ ಸಮುದಾಯ ಆಸ್ಪತ್ರೆಯ ಶೌಚಗುಂಡಿ ತುಂಬಿದ ಪರಿಣಾಮ ಅದರಿಂದ ಹೊರಬರುತ್ತಿರುವ ಕೊಳಚೆ ನೀರು ಉಕ್ಕಿ ಹರಿದು ಮನೆಯ ಪರಿಸರ ದುರ್ನಾತ ಬೀರುವಂತಾಗಿದೆ. ಪಕ್ಕದಲ್ಲಿಯೇ ನಮ್ಮ ಅಂಗಳದಲ್ಲಿ ಮನೆಯ ಕುಡಿಯುವ ನೀರಿನ ಬಾವಿಯೂ ಇದೆ. ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ತಕ್ಷಣ ಈ ಕುರಿತು ಅಗತ್ಯ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸಿಕೊಡಬೇಕಾಗಿ ಅವರು ಪಟ್ಟಣ ಪಂಚಾಯಿತಿಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.
ದೂರಿನ ಬಗ್ಗೆ ಪ್ರತಿಕ್ರಿಯಿಸಿರುವ ಪಪಂ ಅಧಿಕಾರಿಗಳು ತುಂಬಿಕೊಂಡಿರುವ ಶೌಚಗುಂಡಿಯನ್ನು ಶುಚಿಗೊಳಿಸಿ ಸಮಸ್ಯೆ ಬಗೆಹರಿಸುವಂತೆ ಆಸ್ಪತ್ರೆಯ ಮುಖ್ಯಸ್ಥರಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಶೌಚಗೃಹದ ಗುಂಡಿ ತುಂಬಿದ ಪರಿಣಾಮ ಕೊಳಚೆ ನೀರು ಹೊರಹರಿಯುತ್ತಿತ್ತು. ಈಗಾಗಲೇ 2 ಬಾರಿ ಕೊಳಚೆ ನೀರನ್ನು ಹೊರತೆಗೆಯಲಾಗಿದೆ. ಶೀಘ್ರ ಪೂರ್ತಿಯಾಗಿ ಶೌಚಗುಂಡಿಯನ್ನು ಶುಚಿಗೊಳಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಕಡಬ ಸಮುದಾಯ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ತ್ರಿಮೂರ್ತಿ ತಿಳಿಸಿದ್ದಾರೆ.