ಜಿಲ್ಲೆ

1ರಿಂದ 5ರವರೆಗೆ ಗೆಜ್ಜೆಗಿರಿಯಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ

ಪುತ್ತೂರು ಗ್ರಾಮಾಂತರ: ದೇಯಿ ಬೈದ್ಯೆತಿ, ಕೋಟಿ-ಚೆನ್ನಯರ ಮೂಲಸ್ಥಾನವಾದ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ನಂದನಬಿತ್ತಲ್ ಗೆಜ್ಜೆಗಿರಿ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಮಾ.1ರಿಂದ ಮಾ.5ರತನಕ ಮೂಡಬಿದಿರೆಯ ಶಿವಾನಂದ ತಂತ್ರಿ ನೇತೃತ್ವದಲ್ಲಿ, ವೈದಿಕ ವಿಧಿವಿಧಾನಗಳೊಂದಿಗೆ ತೌಳವ ಪರಂಪರೆಯ ಅನುಸಾರ ನಡೆಯಲಿದೆ. ಜಾತ್ರಾ ಮಹೋತ್ಸವನ್ನು ವಿಜ್ರಂಭಣೆಯಿಂದ ನಡೆಸಲು ಈಗಾಗಲೇ ಸಕಲ ಸಿದ್ಧತೆಗಳು ನಡೆದಿವೆ.

1ರಂದು ಸಂಜೆ 5.50ರಿಂದ ಸ್ವಸ್ತಿ ಪುಣ್ಯಾಹ ಸ್ಥಳ ಶುದ್ಧಿ, ಸಾಮೂಹಿಕ ಪ್ರಾರ್ಥನೆ, ಉಗ್ರಾಣ ಮುಹೂರ್ತ, ಪ್ರಸಾದ ವಿತರಣೆ ನಡೆಯಲಿದೆ. 2ರಂದು ಬೆಳಗ್ಗೆ 6ಗಂಟೆಯಿಂದ ಗಣಪತಿ ಹೋಮ, ಗುರುಪೂಜೆ, ತೋರಣ ಮುಹೂರ್ತ, ನಾಗದೇವರ ಸಾನ್ನಿಧ್ಯದಲ್ಲಿ ಗಣಹೋಮ, ನವಕ ಕಲಶಾಭಿಷೇಕ, ಆಶ್ಲೇಷ ಬಲಿ ಸೇವೆ, ಮಂಗಳಾರತಿ, ಧೂಮಾವತಿ ಸಾನ್ನಿಧ್ಯ ಮತ್ತು ಎಲ್ಲ ಪರಿವಾರ ಸಾನ್ನಿಧ್ಯದಲ್ಲಿ ಶುದ್ಧಿ ನವಕ ಕಲಶಾಭಿಷೇಕ, ಬೆಳಗ್ಗೆ 11.28ರ ವೃಷಭ ಲಗ್ನ ಸುಮೂಹೂರ್ತದಲ್ಲಿ ಧ್ವಜಾರೋಹಣ, ಪರ್ವ ಸೇವೆ, ಮೂಲಸ್ಥಾನ ಗರಡಿಯಲ್ಲಿ ಮಹಾಪೂಜೆ ನಡೆಯಲಿದೆ.

ಮಧ್ಯಾಹ್ನ 12ಕ್ಕೆ ಮಹಾಮಾತೆಯ ಮಾತೃ ಸಂಕಲ್ಪದಂತೆ ದೇಯಿ ಬೈದ್ಯೆತಿ ಅಮ್ಮನವರ ಮಡಿಲ ಪ್ರಸಾದ ಎಲ್ಲ ಮಾತೆಯರಿಗೆ ಮಡಿಲು ತುಂಬಿಸಿ ಆಶೀರ್ವದಿಸುವ ಕಾರ್ಯಕ್ರಮ. ಸತ್ಯಧರ್ಮ ಚಾವಡಿಯಲ್ಲಿ ಮಹಾಪೂಜೆ, ಅನ್ನಸಂತರ್ಪಣೆ. ಸಂಜೆ 6.30ರಿಂದ ಧೂಮಾವತಿ ಬಲಿ ಉತ್ಸವ, ಧರ್ಮ ಚಾವಡಿಯಲ್ಲಿ ಭಗವತೀ ಸೇವೆ, ಮಹಾಪೂಜೆ, ಸಂಜೆ ಗಂಟೆ 7ರಿಂದ ಗೆಜ್ಜೆಗಿರಿ ಮೇಳದವರಿಂದ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ನಡೆಯುವುದು.

3ರಂದು ಬೆಳಗ್ಗೆ 6ರಿಂದ ಗಣಪತಿ ಹೋಮ, ಗುರುಪೂಜೆ, ದೈವ ಸಾನ್ನಿಧ್ಯದಲ್ಲಿ ಶುದ್ಧಿಕಲಶ, ಬೆಳಗ್ಗೆ 8ರಿಂದ ಧೂಮಾವತಿ ದೈವದ ಭಂಡಾರ ಇಳಿಯುವುದು, ದರ್ಶನ, 9ಗಂಟೆಯಿಂದ ಧೂಮಾವತಿ ನೇಮೋತ್ಸವ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಗಂಟೆ 5ರಿಂದ ಧೂಮಾವತಿ ಬಲಿ ಉತ್ಸವ, ಮಹಾಪೂಜೆ, ಕುಪ್ಪೆ ಪಂಜುರ್ಲಿ ದೈವದ ಭಂಡಾರ ಇಳಿಯುವುದು, ರಾತ್ರಿ 7.30ರಿಂದ ಸತ್ಯಧರ್ಮ ಚಾವಡಿಯಲ್ಲಿ ಮಹಾಪೂಜೆ, ರಾತ್ರಿ 8ರಿಂದ ಕುಪ್ಪೆ ಪಂಜುರ್ಲಿ ನೇಮೋತ್ಸವ, ರಾತ್ರಿ 12ರಿಂದ ಕೊರತಿ ನೇಮೋತ್ಸವ ನಡೆಯುವುದು.

5ರಂದು ಬೆಳಗ್ಗೆ 5.30ರಿಂದ ಗಣಹೋಮ, ಶುದ್ಧಿ ಕ್ರಿಯೆಗಳು, ಕಲಶಾಭಿಷೇಕ, ಧ್ವಜಾವರೋಹಣ, ಗುರುಪೂಜೆ, ಪ್ರಸಾದ ವಿತರಣೆಯೊಂದಿಗೆ ವಾರ್ಷಿಕ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.

ದೇಯಿ ಬೈದ್ಯೆತಿ, ಬೈದರ್ಕಳ ನೇಮೋತ್ಸವ

4ರಂದು ಬೆಳಗ್ಗೆ 6ರಿಂದ ಗಣಪತಿ ಹೋಮ, ಗುರುಪೂಜೆ, ಮೂಲಸ್ಥಾನ ಗರಡಿ, ಬೆಮ್ಮೆರೆ ಗುಂಡ, ಸತ್ಯಧರ್ಮ ಚಾವಡಿಯಲ್ಲಿ ನವಕ ಪ್ರಧಾನ ಹೋಮ, ನವಕ ಕಲಶಾಭಿಷೇಕ, ಅಲಂಕಾರ ಪೂಜೆ, ಬೆಳಗ್ಗೆ 11.45ರಿಂದ ಗರಡಿಯಲ್ಲಿ ಮಹಾಪೂಜೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪಲ್ಲಪೂಜೆ, ಅನ್ನಸಂತರ್ಪಣೆ. ಸಂಜೆ 3.30ರಿಂದ ಮೂಲಸ್ಥಾನ ಗರಡಿಯಲ್ಲಿ ಶುದ್ಧಹೋಮ ಕಲಶ, ಸಂಜೆ 5ರಿಂದ ಧೂಮಾವತಿ ಬಲಿ ಸೇವೆ, ಸಂಜೆ 6ರಿಂದ ಸತ್ಯಧರ್ಮಚಾವಡಿಯಲ್ಲಿ ದೀಪಾರಾಧನೆ ಮಹಾಪೂಜೆ ನಡೆಯುವುದು. ರಾತ್ರಿ 7ರಿಂದ ಮೂಲಸ್ಥಾನ ಗರಡಿಯಿಂದ ಒಲಿಮದೆಯಿಂದ ಹೊರಡುವುದು, ರಾತ್ರಿ ಗಂಟೆ 8ರಿಂದ ದೇಯಿ ಬೈದ್ಯೆತಿ ನೇಮೋತ್ಸವ, ಮಾತೆ ಮಕ್ಕಳ ಪುನೀತ ಸಮಾಗಮ, ರಾತ್ರಿ ಗಂಟೆ 9ರಿಂದ ದೇಯಿ ಬೈದ್ಯೆತಿ ಪ್ರಸಾದ ವಿತರಣೆ, ದೇಯಿ ಬೈದ್ಯೆತಿ ಸಮಾಧಿಯಲ್ಲಿ ದೀಪಾರಾಧನೆ, ಮೂಲಸ್ಥಾನ ಗರಡಿಯಲ್ಲಿ ಬೈದರ್ಕಳ ದರ್ಶನ ಸೇವೆ, ಬೈದರ್ಕಳ ನೇಮೋತ್ಸವ, ಪ್ರಸಾದ ವಿತರಣೆ ಕಾರ್ಯಕ್ರಮಗಳು ನಡೆಯುವುದು.

ಕಂಕನಾಡಿ ಗರಡಿ ಕ್ಷೇತ್ರದಿಂದ ಹಸಿರುವಾಣಿ ಜಾಥಾ

ಇಂದು ಕ್ಷೇತ್ರದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ ಬೆಳಗ್ಗೆ ಗಣಪತಿ ಹವನ, ತನು-ತಂಬಿಲ, ನವಕ ಕಲಶ, ಶುದ್ಧಿ ಹೋಮ, ಪರ್ವ ಸೇವೆ, ಪ್ರಸನ್ನಪೂಜೆ, ಮಂಗಳಾರತಿ ಕಾರ್ಯಕ್ರಮಗಳು ನಡೆಯಲಿವೆ. ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಬೆಳಗ್ಗೆ 10ಕ್ಕೆ ಮಂಗಳೂರಿನ ಕಂಕನಾಡಿ ಗರಡಿ ಕ್ಷೇತ್ರದಿಂದ ಹಸಿರು ಹೊರೆಕಾಣಿಕೆ ಮೆರವಣಿಗೆ ಹೊರಟು ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನ ವಠಾರಕ್ಕೆ ಬರಲಿದೆ. ಮಧ್ಯಾಹ್ನ 3 ಗಂಟೆಗೆ ಮಹಾಲಿಂಗೇಶ್ವರ ದೇವಸ್ಥಾನ ವಠಾರದಿಂದ ವಾಹನ ಜಾಥಾ ಮೂಲಕ ಹಸಿರುವಾಣಿ ಹೊರೆಕಾಣಿಕೆ ಭವ್ಯ ಮೆರವಣಿಗೆ ಗೆಜ್ಜೆಗಿರಿ ಕ್ಷೇತ್ರಕ್ಕೆ ತೆರಳಲಿದೆ ಎಂದು ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ ತಿಳಿಸಿದ್ದಾರೆ.