ಮಾನ್ವಿ ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಡಾ.ಬಸವಪ್ರಭು ಪಾಟೀಲ ಬೆಟ್ಟದೂರು ಬಸವಣ್ಣವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಸಿದ್ದಲಿಂಗ ಶ್ರೀಗಳು, ಮಹಿಳಾ ಬಸವಕೇಂದ್ರದ ತಾಲೂಕು ಅಧ್ಯಕ್ಷೆ ಜಯಲಕ್ಷ್ಮೀ, ಬಸವಕೇಂದ್ರದ ತಾಲೂಕು ಅಧ್ಯಕ್ಷ ನಾಗರಾಜ ಇದ್ದರು.  
ಜಿಲ್ಲೆ

ಮಕ್ಕಳಿಗೆ ವಿಶ್ವ ಗುರು ಬಸವಣ್ಣನವರ ವಚನ ಕಲಿಸಿರಿ

ಮಾನ್ವಿ: ಇಂದಿನ ಯುವಕರು ಸಂಸ್ಕಾರವಿಲ್ಲದೆ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಲಿಂಗಸೂಗುರು ವಿಜಯ ಮಹಾಂತೇಶ್ವರ ಮಠದ ಸಿದ್ದಲಿಂಗ ಶ್ರೀಗಳು ವಿಷಾದ ವ್ಯಕ್ತಪಡಿಸಿದರು.

ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ಶುಕ್ರವಾರ ಬಸವಕೇಂದ್ರ, ಮಹಿಳಾ ಬಸವಕೇಂದ್ರ ಹಾಗೂ ಯುವ ಬಸವಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮಕ್ಕಳಲ್ಲಿ ಸಂಸ್ಕಾರ ಬೆಳೆಯಲು ಮನೆಗಳೇ ಮಠಗಳಾಗಬೇಕು. 12ನೇ ಶತಮಾನದಲ್ಲಿ ತುಳಿತಕ್ಕೆ ಒಳಗಾದವರನ್ನು ಮೇಲೆತ್ತುವ ಮೂಲಕ ಉದ್ಧಾರ ಮಾಡಿ ಜಾತಿ ವ್ಯವಸ್ಥೆ ಹೋಗಲಾಡಿಸಲು ಇಷ್ಟಲಿಂಗ ನೀಡುವ ಮೂಲಕ ಧಾರ್ಮಿಕ, ಸಾಮಾಜಿಕ, ಸಮಾನತೆ ಕಲ್ಪಿಸಿದರು.

ಇಲ್ಲಕಲ್ ವಿಜಯಮಹಾಂತ ಸ್ವಾಮೀಜಿಗಳು ಮಠಕ್ಕೆ ಬರುವ ಭಕ್ತರಿಗೆ ವಚನ ದಾಸೋಹ ನೀಡಿ, ಜನರಲ್ಲಿ ವೈಚಾರಿಕತೆ ಬೆಳೆಸಿ ತಮ್ಮ ಶಾಖಾ ಮಠಗಳಲ್ಲಿ ದಿನ-ದಲಿತರನ್ನು ಪೀಠಾಧ್ಯಕ್ಷರನ್ನಾಗಿ ಮಾಡುವ ಮೂಲಕ ಬಸವಣ್ಣನವರು ಕಂಡಂತಹ ಸಮಾನತೆಯ ಸಮಾಜ ನಿರ್ಮಾಣ ಮಾಡಲು ಶ್ರಮಿಸಿದವರು ಎಂದರು.

ರಾಯಚೂರಿನ ಎಸ್‌ಎಸ್‌ಆರ್‌ಜಿ ಮಹಿಳಾ ಕಾಲೇಜಿನ ಉಪನ್ಯಾಸಕಿ ಡಾ.ರಾಜೇಶ್ವರಿ ವಿರಕ್ತಮಠ ಮಾತನಾಡಿ ಜಾತಿ, ಧರ್ಮ, ಸಮುದಾಯಗಳ ಭೇದವಿಲ್ಲದೆ ಬಸವಣ್ಣನರು ಅನುಭವ ಮಂಟಪದ ಮೂಲಕ ನೀಡಿದ ಸಂಸ್ಕಾರವನ್ನು ನಮ್ಮ ಮಕ್ಕಳಿಗೆ ನೀಡಬೇಕು ಲಿಂಗಪೂಜೆ, ವಚನಗಳ ಅಧ್ಯಯನ ಮಾಡಿಸಬೇಕು ಎಂದು ಹೇಳಿದರು.

ವಿಜೇತರಾದವರಿಗೆ ಬಹುಮಾನ

ಬಸವ ಜಯಂತಿ ಕಾರ್ಯಕ್ರಮದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮಹಿಳಾ ಬಸವ ಕೇಂದ್ರದ ಅಧ್ಯಕ್ಷೆ ಜಯಲಕ್ಷ್ಮೀ, ಶಶಿಕಲಾ ಪಾಟೀಲ್ ಮಾತನಾಡಿದರು.

ಬಸವ ಕೇಂದ್ರದ ಗೌರವ ಅಧ್ಯಕ್ಷ ಡಾ. ಬಸವಪ್ರಭುಪಾಟೀಲ್ ಬೆಟ್ಟದೂರು, ತಾಲೂಕು ಅಧ್ಯಕ್ಷ ನಾಗರಾಜ ಬಳಿಗಾರ, ದೇವೇಂದ್ರ ದುರ್ಗದ್, ಕುಮಾರಸ್ವಾಮಿ ಮೇದಾ ಇನ್ನಿತರರು ಇದ್ದರು.