ಜಿಲ್ಲೆ

ಕಾರ್ವಿುಕರ ಸಮಸ್ಯೆ ಪರಿಹಾರಕ್ಕೆ ತಿರುಪ್ಪೂರ್ ಜಿಲ್ಲಾಡಳಿತ ಮಾದರಿ

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ವಲಸೆ ಕಾರ್ವಿುಕರ ಸಮಸ್ಯೆಗಳನ್ನು ಬಗೆಹರಿಸಲು ತಮಿಳುನಾಡಿನ ತಿರುಪ್ಪೂರ್ ಜಿಲ್ಲಾಡಳಿತ ಮಾದರಿ ಎನಿಸಿದೆ. ‘ಭಾರತದ ಜವಳಿ ಹಬ್’ ಎನಿಸಿರುವ ತಿರುಪ್ಪೂರ್​ಗೆ ಉದ್ಯೋಗವನ್ನರಸಿ ದೇಶಾದ್ಯಂತ ಸಾವಿರಾರು ಕಾರ್ವಿುಕರು ಆಗಮಿಸುತ್ತಾರೆ. ಲಾಕ್​ಡೌನ್ ಸಂದರ್ಭದಲ್ಲಿ ಆಂದಾಜು 63 ಸಾವಿರ ಕಾರ್ವಿುಕರಿಗೆ ಆಯಾ ಕಂಪನಿಗಳು ವಸತಿ ಹಾಗೂ ಆಹಾರ ವ್ಯವಸ್ಥೆ ಮಾಡಿದ್ದವು.

ಕೋವಿಡ್-19 ಸಂದರ್ಭದಲ್ಲಿ ಕೆಲಸ ಮಾಡಲು ತಿರುಪ್ಪೂರು ಜಿಲ್ಲಾಧಿಕಾರಿ ವಿಜಯ ಕಾರ್ತಿಕೇಯನ್ ಟ್ವೀಟ್ ಮೂಲಕ ಸ್ವಯಂಸೇವಕ ರನ್ನು ಆಹ್ವಾನಿಸಿದ್ದರು. ಮೌಲ್ಯಮಾಪನ ಮೂಲಕ ಸ್ವಯಂಸೇವಕರನ್ನು ಆಯ್ಕೆ ಮಾಡಿ ವಿವಿಧ ಜವಾಬ್ದಾರಿ ನೀಡಿದರು. ವೈದ್ಯರಿಂದ ಹಿಡಿದು ಚಾಲಕರವರೆಗೆ ಸೇರಿ ಎಲ್ಲ ವರ್ಗದ ಜನರು ಇದ್ದರು.

ಲಾಕ್​ಡೌನ್ ಘೋಷಣೆಯಾದ ತಕ್ಷಣ ತಿರುಪ್ಪೂರು ಜಿಲ್ಲಾಡಳಿತ ವಲಸೆ ಕಾರ್ವಿುಕರ ಸಮಸ್ಯೆಗಳನ್ನು ಬಗೆಹರಿಸಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಂಡಿತು. ಹಿಂದಿ, ಒಡಿಯಾ, ಬಂಗಾಳಿ, ತೆಲುಗು, ಕನ್ನಡ ಮತ್ತಿತರರ ಪ್ರಾದೇಶಿಕ ಭಾಷೆಗಳಲ್ಲಿ ಸಹಾಯವಾಣಿ ಆರಂಭಿಸಲಾಯಿತು. ವಿವಿಧ ಸಮಸ್ಯೆಗಳನ್ನು ಬಗೆಹರಿಸುವ ಸ್ವಯಂಸೇವಕ ತಂಡಕ್ಕೆ ಅಧಿಕಾರಿಗಳನ್ನು ನೇಮಿಸಲಾಯಿತು. ಇದಕ್ಕಾಗಿ 1,500 ಸ್ವಯಂಸೇವಕರು ಇದ್ದರು. ಕಾರ್ವಿುಕರು ಕರೆಗಳನ್ನು ಸ್ವೀಕರಿಸಿ ಅವರಿಗೆ ಬೇಕಾದ ದಿನಸಿ, ಆಹಾರ ಪೊಟ್ಟಣ, ತರಕಾರಿ, ಹಣ್ಣು ಹಾಗೂ ಮಾಂಸವನ್ನು ಪ್ರತ್ಯೇಕ ವಾಹನದಲ್ಲಿ ಮನೆಬಾಗಿಲಿಗೆ ತಲುಪಿಸಲಾಯಿತು.

‘ತಿರುಪ್ಪೂರ್ ಕರೊನಾ ಫೈಟರ್ಸ್’ ವಲಸೆ

ಕಾರ್ವಿುಕರ ಸಂಖ್ಯೆ, ವೈದ್ಯಕೀಯ ನೆರವು, ಪಡಿತರ, ಔಷಧ ವಿತರಣೆ, ಗರ್ಭಿಣಿ ಮಹಿಳೆಯರಿಗೆ ಏನು ಬೇಕು ಎಂಬುದರ ಬಗ್ಗೆ ಗುರುತಿಸುವ ವಿಚಾರದಲ್ಲಿ ಒಳ್ಳೆಯ ಕೆಲಸ ಮಾಡಿತ್ತು. ಜ್ವರ ಮತ್ತಿತರರ ಸಮಸ್ಯೆಗಳಿಂದ ಬಳಲುತ್ತಿದ್ದ ಕಾರ್ವಿುಕರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳು ಲಭ್ಯವಿರದ ಕಾರಣ ತಿರುಪ್ಪೂರ್ ಜಿಲ್ಲಾಡಳಿತ ಟಿಸಿಎಫ್ ಹಾಗೂ ವೈದ್ಯರ ಸಹಾಯದಿಂದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಿತು. ಕರೊನಾ ಸೋಂಕಿತರು ಪತ್ತೆಯಾದೊಡನೆ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಜಿಲ್ಲಾಡಳಿತವು ಪ್ರತಿಯೊಬ್ಬ ಕಾರ್ವಿುಕರ ಮನೆಬಾಗಿಲಿಗೆ ಪಡಿತರ ವಿತರಣೆ ಹಾಗೂ ಹಸಿವುನಿಂದ ಬಳಲಬಾರದೆಂಬ ಉದ್ದೇಶದಿಂದ ಎಲ್ಲರಿಗೂ ನಿರಂತರ ಫುಡ್ ಕಿಟ್ ವಿತರಿಸುವ ಕೆಲಸ ಮಾಡಿತ್ತು.

ಸ್ಥಳೀಯರಿಂದ ಮೆಚ್ಚುಗೆ

ಟಿಸಿಎಫ್ ಸಿಬ್ಬಂದಿ ಕೇವಲ ವಲಸಿಗರಿಗೆ ಮಾತ್ರ ಸೀಮಿತವಾಗಿರಲಿಲ್ಲ. ಉತುಕುಲ್ಲಿ, ಧರಪುರಂ, ಉದುಮಾಲ್​ಪೇಟೆ, ಅವಿನಾಶಿ, ಕಂಗೇಯಂ, ಮದತುಕುಲಂ, ತಿರುಪ್ಪೂರ್ ಉತ್ತರ ಮತ್ತು ದಕ್ಷಿಣದ ಕಿರಾಣಿ ಅಂಗಡಿಗಳು, ಹಾಲು ಮಾರಾಟಗಾರರು ಹಾಗೂ ವೈದ್ಯಕೀಯ ಮಳಿಗೆಗಳ ಪಟ್ಟಿ ಸಂಗ್ರಹಿಸುವ ಕೆಲಸ ಮಾಡಿತ್ತು. ಜನರಿಗೆ ಅವರ ಮನೆ ಬಾಗಿಲಿಗೆ ಔಷಧ ವಿತರಣೆ ಮಾಡಿದ್ದರು. ಕರೊನಾ ತಡೆಯಲು ಪಾಲಿಸಬೇಕಾದ ನಿಯಮಗಳ ಬಗ್ಗೆ ಜಾಲತಾಣದಲ್ಲಿ ಜಿಲ್ಲಾಡಳಿತ ಅರಿವು ಮೂಡಿಸಿತು. ವಿವಿಧ ಎನ್​ಜಿಒ ಸಹಯೋಗದಲ್ಲಿ ರೈತರಿಂದ ನೇರವಾಗಿ ತರಕಾರಿ ಖರೀದಿಸಿ ಅಡುಗೆ ತಯಾರಿಸಿ ಕಾರ್ವಿುಕರಿಗೆ, ನಿರ್ಗತಿಕರಿಗೆ, ಬಡ ಮತ್ತು ಮಧ್ಯಮ ವರ್ಗದವರಿಗೆ ಮೂರು ಹೊತ್ತು ಊಟ ನೀಡುವ ವ್ಯವಸ್ಥೆ ಮಾಡಿತ್ತು. ಡಿಸಿ ತೆಗೆದುಕೊಂಡ ಒಳ್ಳೆಯ ಕ್ರಮಗಳಿಂದ ಇವೆಲ್ಲವೂ ಸಾಧ್ಯವಾಯಿತು ಎಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.