ಯಲಬುರ್ಗಾ ತಾಪಂ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಜಿಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಮಾತನಾಡಿದರು. ತಾಪಂ ಇಒ ಸಂತೋಷ ಪಾಟೀಲ್ ಇದ್ದರು. 
ಜಿಲ್ಲೆ

ಸಕಾಲಕ್ಕೆ ಸರ್ಕಾರದ ಸೌಲಭ್ಯ ಒದಗಿಸಿ

Kopala - Desk - Eraveni

ಯಲಬುರ್ಗಾ: ತಾಲೂಕಿನಲ್ಲಿ ಡೆಂೆ ತಡೆಗಟ್ಟಲು ಆರೋಗ್ಯ ಇಲಾಖೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಆರೋಗ್ಯ ಅಧಿಕಾರಿಗೆ ತಿಳಿಸಿದರು.

ಪಟ್ಟಣದ ತಾಪಂ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶಂಕ್ರಯ್ಯ ಪುರಾಣಿಕ ಪ್ರತಿಕ್ರಿಯಿಸಿ, ಆಗಸ್ಟ್‌ನಲ್ಲಿ 22 ಡೆಂೆ ಪ್ರಕರಣ ಕಂಡು ಬಂದಿವೆ.

ತಡೆಗಟ್ಟಲು ಆರೋಗ್ಯ ಇಲಾಖೆಯಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಶಂಕಿತರಿಗೆ ಸಕಾಲಕ್ಕೆ ಔಷದೋಪಚಾರ ನೀಡಿ ನಿಗಾವಹಿಸಲಾಗಿದೆ. ಲಾರ್ವಾ ಸರ್ವೆ ನಡೆಸಲಾಗಿದೆ ಎಂದರು.

ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳು ಪರಿಹಾರ ಹಣಕ್ಕಾಗಿ ಇಲಾಖೆಗೆ ಅಲೆಯುವಂತಾಗಬಾರದು. ಸಕಾಲಕ್ಕೆ ಸರ್ಕಾರದ ಸೌಲಭ್ಯ ಒದಗಿಸಿ ಆತ್ಮಸ್ಥೈರ್ಯ ತುಂಬಬೇಕು. ಬಾಕಿ ಅರ್ಜಿ ವಿಲೇವಾರಿಯಾಗಬೇಕು ಎಂದು ತಾಂತ್ರಿಕ ಕೃಷಿ ಅಧಿಕಾರಿ ಶಿವಾನಂದ ಮಳಗಿಗೆ ಉಪಕಾರ್ಯದರ್ಶಿ ಸೂಚಿಸಿದರು.

ಜಿಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ಮಾತನಾಡಿ, ಪ್ರತಿ 100ಮೀ.ಗೆ ಒಂದು ಸಸಿ ನೆಡಲು ಸರ್ಕಾರ ಆದೇಶಿಸಿದೆ. ವಲಯ ಅರಣ್ಯ ಇಲಾಖೆ ಗಮನಹರಿಸಬೇಕು. ಸಸಿಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಮಳೆಗಾಲದಲ್ಲಿ ಸಸಿ ಬೆಳೆಯಲು ಪೂರಕ ವಾತಾವರಣವಿದ್ದು, ಬಳಕೆ ಮಾಡಿಕೊಳ್ಳಬೇಕು ಎಂದು ವಲಯ ಅರಣ್ಯಾಧಿಕಾರಿ ಬಸವರಾಜ ಗೊಗೇರಿಗೆ ತಿಳಿಸಿದರು.

21ನೇ ಜಾನುವಾರು ಗಣತಿ ಪ್ರಾರಂಭಗೊಂಡಿದ್ದು, ನಿಗದಿತ ಸಮಯಕ್ಕೆ ಗಣತಿ ಪೂರ್ಣಗೊಳಿಸಲಾಗುವುದು. ಲಭ್ಯ ಇರುವ ಸಿಬ್ಬಂದಿ ಸೇವೆ ಬಳಸಿಕೊಂಡು ಜಾನುವಾರುಗಳಿಗೆ ಆರೋಗ್ಯ ಸೇವೆ ನೀಡಲಾಗುತ್ತಿದೆ ಎಂದು ಪಶುಪಾಲನಾ ಸಹಾಯಕ ನಿರ್ದೇಶಕ ಪ್ರಕಾಶ ಚೂರಿ ಸಭೆಯ ಗಮನಕ್ಕೆ ತಂದರು. ಉಪಕಾರ್ಯದರ್ಶಿ ಮಾತನಾಡಿ, ಇಲಾಖೆಯಲ್ಲಿ ವೈದ್ಯರ ಕೊರತೆ ನಿಗಿಸಿಕೊಳ್ಳಲು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಬೇಕು ಎಂದರು.

ತಾಲೂಕಿನ ನಾನಾ ಹಳ್ಳಿಗಳಲ್ಲಿ ಹೊಸದಾಗಿ ಅಂಗನವಾಡಿ ಕೇಂದ್ರ ಕಟ್ಟಡಗಳು ಮಂಜೂರಾಗಿದ್ದು, ಸ್ಥಳಾವಕಾಶ ಲಭ್ಯವಿರುವ ಕಡೆ ಕಾಮಗಾರಿ ಪ್ರಾರಂಭಿಸಬೇಕು. ಅನಗತ್ಯ ವಿಳಂಬ ಮಾಡುವುದು ಸರಿಯಲ್ಲ. ಸ್ಥಳದ ಸಮಸ್ಯೆ ಇದ್ದರೆ ತಾಪಂ ಇಒ ಅವರ ಗಮನಕ್ಕೆ ತರಬೇಕು ಎಂದು ನಿರ್ಮಿತಿ ಕೇಂದ್ರದ ಮಹಾದೇವಪ್ಪ ಪತ್ತಾರ್‌ಗೆ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ತಿಳಿಸಿದರು.

  • ಮಾನವ ಸರಪಳಿ ಕಾರ್ಯಕ್ರಮ
    ಸೆ.15ರಂದು ಪ್ರಜಾಪ್ರಭುತ್ವ ದಿನಾಚರಣೆ ಹಿನ್ನಲೆಯಲ್ಲಿ ಎಲ್ಲ ಸರ್ಕಾರಿ ನೌಕರರು ಕೊಪ್ಪಳ ತಾಲೂಕಿನ ಹಟ್ಟಿ ಗ್ರಾಪಂನಿಂದ ಮುನಿರಾಬಾದ್ ಗ್ರಾಪಂವರೆಗೆ ಮಾನವ ಸರಪಳಿ ಕಾರ್ಯಕ್ರಮ ಆಯೋಜಿಸಲಾಗಿದೆ. ಎಲ್ಲ ನೌಕರರು ಪರಿವಾರದೊಂದಿಗೆ ಭಾಗವಹಿಸಬೇಕು ಎಂದು ಜಿಪಂ ಉಪಕಾರ್ಯದರ್ಶಿ ತಿಳಿಸಿದರು. ತಾಪಂ ಇಒ ಸಂತೋಷ ಪಾಟೀಲ್, ಸಹಾಯಕ ನಿರ್ದೇಶಕ ಫಕೀರಪ್ಪ ಕಟ್ಟಿಮನಿ ಇತರರಿದ್ದರು.