

ಬಳ್ಳಾರಿ : ಸಾರ್ವಜನಿಕರು ಸೊಳ್ಳೆ ನಿರ್ಮೂಲನೆ ಮಾಡಲು ವಾರಕ್ಕೊಮ್ಮೆ ನೀರು ತುಂಬಿಸುವ ಪರಿಕರಗಳನ್ನು ಸ್ವಚ್ಛಗೊಳಿಸುವ ಮೂಲಕ ಡೆಂೆ ನಿಯಂತ್ರಣಕ್ಕೆ ಕೈ ಜೋಡಿಸಬೇಕು ಎಂದು ಡಿಎಚ್‌ಒ ಡಾ.ವೈ. ರಮೇಶ್‌ಬಾಬು ತಿಳಿಸಿದರು.
ಇಲ್ಲಿನ ಬಂಡಿಹಟ್ಟಿಯ ಆಶ್ರಯ ಕಾಲನಿಯಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪ್ರತಿ ಶುಕ್ರವಾರ ಈಡಿಸ್ ಸೊಳ್ಳೆಯ ಲಾರ್ವಾ ನಿರ್ಮೂಲನಾ ದಿನದ ಅಂಗವಾಗಿ ಜಿಲ್ಲಾದ್ಯಂತ ಸಮೀಕ್ಷೆ ಹಮ್ಮಿಕೊಳ್ಳಲಾದ ಹಿನ್ನಲೆಯಲ್ಲಿ ಶುಕ್ರವಾರ ನಡೆದ ಸಮೀಕ್ಷಾ ಕಾರ್ಯದಲ್ಲಿ ಮಾತನಾಡಿದರು. ಬಳಕೆಗಾಗಿ ನೀರು ತುಂಬುವ ಡ್ರಮ್, ಬ್ಯಾರೆಲ್, ಸಿಮೆಂಟ್ ತೊಟ್ಟಿ ಮುಂತಾದವುಗಳಲ್ಲಿ ಕಂಡುಬರುವ ಬಾಲದ ಹುಳು ರೀತಿಯಲ್ಲಿ ಇರುವ ಕ್ರಿಮಿಯು ಸೊಳ್ಳೆ ಮರಿಯಾಗಿದ್ದು, ಇದು 7 ದಿನಗಳ ಅವಧಿಯಲ್ಲಿ ಸೊಳ್ಳೆಯಾಗಿ ಬದಲಾವಣೆಗೊಂಡು ಮನುಷ್ಯರನ್ನು ಕಚ್ಚುತ್ತದೆ. ಒಂದು ವೇಳೆ ಸೋಂಕು ಹೊಂದಿದ ಸೊಳ್ಳೆಯು ಮೊಟ್ಟೆಯಿಟ್ಟು ಮರಿಗಳಾಗಿ ಅದರಿಂದ ಹೊರಬರುವ ಎಲ್ಲ ಸೊಳ್ಳೆಗಳು ಡೆಂೆ ರೋಗವನ್ನು ಹರಡುವ ಸಾಮರ್ಥ್ಯ ಹೊಂದಿರುತ್ತದೆ ಎಂದರು.
ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ಅಬ್ದುಲ್ಲಾ ಮಾತನಾಡಿ, ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಔಷಧ ದಾಸ್ತಾನು ಲಭ್ಯವಿದ್ದು, ಕುಟುಂಬದ ಸದಸ್ಯರಲ್ಲಿ ಯಾರಿಗಾದರೂ ಜ್ವರ ಕಂಡು ಬಂದಲ್ಲಿ ತಕ್ಷಣವೇ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಬೇಕು ಎಂದರು.