ಹಾವೇರಿ: ಮೆಕ್ಕೆಜೋಳ ತುಂಬಿದ ಲಾರಿ ಪಲ್ಟಿಯಾಗಿದ್ದು, ಅದರಲ್ಲಿದ್ದ ಮೂವರು ಉಸಿರುಗಟ್ಟಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಹಾವೇರಿ ತಾಲೂಕಿನ ಹೋಸರಿತ್ತಿ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ.
ಲಾರಿಯಲ್ಲಿದ್ದ ಆನಂದ (35), ಮಂಜು (37), ಆನಂದ (33) ಮೃತಪಟ್ಟವರು. ಮೆಕ್ಕೆಜೋಳ ತುಂಬಿದ್ದ ಲಾರಿ ಇಚ್ಚಂಗಿಯಿಂದ ಹೋಸರಿತ್ತಿಗೆ ಹೋಗುವಾಗ ಈ ಅವಘಡ ಸಂಭವಿಸಿದೆ. ಈ ವಾಹನ ಮಾರುಕಟ್ಟೆಗೆ ತೆರಳುತ್ತಿದ್ದು, ಮೃತಪಟ್ಟವರೆಲ್ಲರೂ ಹಮಾಲಿಗಳು.
ಮಾರ್ಗಮಧ್ಯೆ ಅಪಘಾತಕ್ಕೀಡಾದ ಲಾರಿ ಪಲ್ಟಿಯಾಗಿದೆ. ಆಗ ಲಾರಿಯಲ್ಲಿದ್ದ ಜೋಳದ ರಾಶಿಯೊಳಗೆ ಈ ಹಮಾಲಿಗಳು ಸಿಲುಕಿ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ. ಬಳಿಕ ಜೆಸಿಬಿ ಮೂಲಕ ಲಾರಿಯನ್ನು ಎತ್ತಿ ಮೃತದೇಹಗಳನ್ನು ಹೊರತೆಗೆಯಲಾಗಿದೆ.
ಸಾವಿಗೀಡಾದ ಹಮಾಲಿಗಳು ಯಾವ ಊರಿನವರು ಎಂಬುದು ಇನ್ನಷ್ಟೇ ಖಚಿತವಾಗಬೇಕಿದೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.