ಜಿಲ್ಲೆ

ದೇವಸ್ಥಾನಕ್ಕೆ ಹೋಗುವ ಮಾರ್ಗಮಧ್ಯದಲ್ಲೇ ಮೂವರು ಮಕ್ಕಳು ಸಾವು, ಬದುಕುಳಿದ ತಾಯಿ

ಬಾಗಲಕೋಟೆ: ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದಲ್ಲಿ ಕರಳು ಹಿಂಡುವ ದುರ್ಘಟನೆ ನಡೆದಿದ್ದು, ದೇವಸ್ಥಾನಕ್ಕೆ ಹೋಗುವ ಮಾರ್ಗ ಮಧ್ಯದಲ್ಲೇ ಮೂವರು ಮಕ್ಕಳು ಸಂಶಯಾಸ್ಪದವಾಗಿ ಸಾವಿಗೀಡಾಗಿದ್ದಾರೆ.

ಶಿವಾನಿ (12), ಶಿವಶಂಕರ (10) ಹಾಗೂ ಶಿವಶ್ರೀ (6) ಮೃತ ದುರ್ದೈವಿಗಳು. ಮಕ್ಕಳ ತಾಯಿ ಭಾಗ್ಯಶ್ರೀ ಚಿಕ್ಕಯ್ಯ ಮಠದ(30) ಬದುಕುಳಿದಿರುವುದು ಇದೀಗ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಬಂಡಿಗಣಿ ಗ್ರಾಮದ ದುರ್ಗಾದೇವಿ ಗುಡಿಗೆ ಹೋಗುವ ಮಾರ್ಗದ ಗುಡ್ಡದಲ್ಲಿ ಮಕ್ಕಳು ಸಾವನ್ನಪ್ಪಿದ್ದು, ಅಸ್ವಸ್ಥಗೊಂಡಿದ್ದ ತಾಯಿಯನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಮಕ್ಕಳ ಸಾವು ಹೇಗಾಯಿತು ಎನ್ನುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್, ಸ್ಥಳಕ್ಕೆ ಭೇಟಿ ವಿಚಾರಣೆ ನಡೆಸಿದ್ದಾರೆ. ತಾಯಿ ತಾನು ವಿಷ ಕುಡಿದು, ಮಕ್ಕಳಿಗೂ ವಿಷ ಕುಡಿಸಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ.

ಮೃತ ಮಕ್ಕಳ ತಂದೆ ಚಿಕ್ಕಯ್ಯ ಮಠದ ಎರಡು ವರ್ಷಗಳ ಹಿಂದೆ ಕೊಲೆಯಾಗಿದ್ದರು. ತಾಯಿ ಮತ್ತು ಮೂವರು ಮಕ್ಕಳು ಮಾತ್ರ ಬಂಡಿಗಣಿ ಗ್ರಾಮದಲ್ಲಿ ವಾಸವಿದ್ದರು. ಇದೀಗ ಮಕ್ಕಳು ಸಹ ಮೃತಪಟ್ಟಿದ್ದು, ತಾಯಿ ಏಕಾಂಗಿಯಾಗಿದ್ದಾಳೆ. ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ. (ದಿಗ್ವಿಜಯ ನ್ಯೂಸ್​)