ಬೆಂಗಳೂರು: ಮಾಲೀಕರ ಮನೆಯಲ್ಲಿ ಚಿನ್ನಾಭರಣ ದೋಚಿದ್ದ ಮನೆ ಕೆಲಸದಾಕೆ ಸೇರಿದಂತೆ ಮೂವರನ್ನು ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ.
ತಿಪ್ಪಸಂದ್ರ ನಿವಾಸಿ ಶೃತಿ (31) ಮತ್ತು ಈಕೆಯ ಸ್ನೇಹಿತರಾದ ಸಿದ್ದೇಗೌಡ ಅಲಿಯಾಸ್ ದೇವರಾಜು (31) ಮತ್ತು ಸೋಮಶೇಖರ್ (29) ಬಂಧಿತರು. ಆರೋಪಿಗಳಿಂದ 20 ಲಕ್ಷ ರೂ. ಮೌಲ್ಯದ 350 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕನಕಪುರ ರಸ್ತೆ ದೊಡ್ಡಕಲ್ಲಸಂದ್ರ ಸಮೀಪದ ನಾರಾಯಣನಗರದ ನಿವಾಸಿ ಡಿ.ಎನ್. ತೇಜಸ್ ಎಂಬುವವರ ಮನೆಯಲ್ಲಿ ಶೃತಿ, ಎರಡು ವರ್ಷದಿಂದ ಮನೆ ಕೆಲಸ ಮಾಡುತ್ತಿದ್ದಳು. ಮಾ.25ರಂದು ಸ್ನೇಹಿತರ ಮನೆಯಲ್ಲಿ ಸಮಾರಂಭವಿದ್ದ ಕಾರಣಕ್ಕೆ ತೇಜಸ್ ಮತ್ತು ಅವರ ಪತ್ನಿ ಚಿನ್ನಾಭರಣವನ್ನು ಲಾಕರ್‌ನಲ್ಲಿ ತೆಗೆದು ಬಳಕೆ ಮಾಡಿದ್ದರು.
ವಾಪಸ್ ಬಂದ ಮೇಲೆ ಆಭರಣ ಬಿಚ್ಚಿ ಮಲಗುವ ಕೋಣೆಯಲ್ಲಿ ಇಟ್ಟದ್ದರು. ಆದರೆ, ಲಾಕರ್ ಬಳಕೆ ಮಾಡಿರಲಿಲ್ಲ. ಏಪ್ರಿಲ್ 6ರಂದು ರಾತ್ರಿ ಒಡವೆಯನ್ನು ಲಾಕರ್‌ನಲ್ಲಿ ಭದ್ರ ಮಾಡುವ ಸಲುವಾಗಿ ನೋಡಿದಾಗ 350 ಗ್ರಾಂ ಚಿನ್ನಾಭರಣ ಕಳವಾಗಿದ್ದವು. ಗಾಬರಿಗೊಂಡ ತೇಜಸ್ ದಂಪತಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.
ದಂಪತಿಗಳು ನೀಡಿದ ದುರಿನಲ್ಲಿ ದೂರಿನಲ್ಲಿ ಮನೆ ಕೆಲಸದಾಕೆ ಶೃತಿ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು, ಏಪ್ರಿಲ್ 7ರಂದು ಶೃತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿರುವುದು ಬಾಯ್ಬಿಟ್ಟಿದ್ದಾಳೆ. ಅಲ್ಲದೆ, ಕದ್ದ ಚಿನ್ನಾಭರಣ ಮಾರಾಟ ಮಾಡಲು ಸ್ನೇಹಿತರ ಸಹಾಯ ಪಡೆದಿದ್ದಳು. ಕದ್ದ ಚಿನ್ನವನ್ನು ಗಿರವಿ ಇಟ್ಟು ಹಣ ಪಡೆದಿದ್ದಳು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.