ಶಿರಸಿ: ಸ್ಥಳೀಯರ ಒಪ್ಪಿಗೆ ಪಡೆಯದೇ ಸಣ್ಣ ನೀರಾವರಿ ಇಲಾಖೆ ತಾಲೂಕಿನ ಹೆಬ್ಬಲಸು ಅಡಕೆಕಾಯಿಜಡ್ಡಿ ಊರಿನಲ್ಲಿ ಬಾಂದಾರು ನಿರ್ಮಿಸುತ್ತಿದೆ. ಇದರಿಂದಾಗಿ ಇಲ್ಲಿಯ ರೈತರು 30 ಎಕರೆ ಕೃಷಿ ಪ್ರದೇಶ ಮಳೆಗಾಲದಲ್ಲಿ ಮುಳುಗಡೆ ಆಗುವ ಆತಂಕ ಎದುರಿಸುತ್ತಿದ್ದಾರೆ.
ಗುರುವಾರ ಮಾಧ್ಯಮದೊಂದಿಗೆ ತಮ್ಮ ಅಳಲು ತೋಡಿಕೊಂಡಿರುವ ಗ್ರಾಮಸ್ಥರು, 2019-20 ರ ಅವಧಿಯಲ್ಲಿ ಸಮೀಪದ ಬಾಳಗಾರ ಸೌಲಿನಲ್ಲಿ ಈ ಬಾಂದಾರು ನಿರ್ಮಿಸಲು 2 ಕೋಟಿ ರೂ. ಮಂಜೂರಾಗಿತ್ತು. ಆದರೆ, ಅಲ್ಲಿ ಸೂಕ್ತ ಜಾಗ ಇಲ್ಲ ಎಂಬ ಕಾರಣ ನೀಡಿ ಅಡಕೆಕಾಯಿಜಡ್ಢಿ ಬಳಿ ಈ ವರ್ಷ ನಿರ್ಮಾಣ ಕಾಮಗಾರಿ ಆರಂಭಿಸಿದ್ದಾರೆ. ಈಗಾಲೇ ಬಾಂದಾರು ನಿರ್ಮಿಸಲು ಜೆಸಿಬಿಯಿಂದ ಮಣ್ಣು ತೆಗೆಯಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಡಕೆಕಾಯಿಜಡ್ಡಿ ಊರಿನ ಕೃಷಿ ಪ್ರದೇಶ ತಗ್ಗಿನಲ್ಲಿದೆ. ಪ್ರತಿ ವರ್ಷವೂ ಮಳೆಗಾಲದಲ್ಲಿ ಪ್ರವಾಹ ಬಂದಾಗ ನೀರು ಉಕ್ಕಿ ಇಲ್ಲಿಯ ಅಡಕೆ ತೋಟಕ್ಕೆ ಹಾಕಿದ ಗೊಬ್ಬರ ಕೊಚ್ಚಿಹೋಗುತ್ತದೆ. ಹೊಳೆಯ ಆಕಡೆ ಇರುವ ಭತ್ತದ ಗದ್ದೆಯ ಮೇಲೂ ಪ್ರವಾಹದ ನೀರು ಹರಿಯುತ್ತದೆ. ಇಂತಹ ಜಾಗದಲ್ಲಿ ಬಾಂದಾರು ನಿರ್ಮಿಸಿದರೆ ಸಂಪೂರ್ಣ ಮಳೆಗಾಲದಲ್ಲಿ ಪ್ರವಾಹ ಎದುರಿಸಬೇಕಾದ ಸಾಧ್ಯತೆಯ ಜೊತೆಗೆ ಇಲ್ಲಿಯ ನಾಲ್ಕು ಮನೆಗಳೂ ನೀರಿನ ಪ್ರವಾಹಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದರು.
ಸ್ಥಳೀಯ ನಿವಾಸಿ ದತ್ತಾತ್ರೇಯ ಜೋಶಿ ಹೇಳುವಂತೆ, ಇಲ್ಲಿ ಬಾಂದಾರು ನಿರ್ಮಿಸಿದರೆ ಯಾರಿಗೂ ಪ್ರಯೋಜನವಾಗುವುದಿಲ್ಲ. ಹೀಗಾಗಿ, ಬಾಂದಾರು ನಿರ್ಮಾಣಕ್ಕೆ ಸ್ಥಳೀಯರು ಯಾರೂ ಆಗ್ರಹಿಸಿರಲಿಲ್ಲ. ಬಾಂದಾರು ನಿರ್ಮಾಣವಾದರೆ ನಮ್ಮ ಮಳೆಗಾಲದ ಬದುಕು ಭಯಾನಕವಾಗಲಿದೆ. ಈ ಕುರಿತಂತೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಲ್ಲಿ ವಿನಂತಿಸಿದರೂ ಸ್ಪಂದಿಸಿಲ್ಲ. ಸ್ಥಳೀಯರಿಗೆ ಉಂಟಾಗಲಿರುವ ಸಮಸ್ಯೆಯ ಬಗ್ಗೆ ಶಾಸಕ ಭೀಮಣ್ಣ ನಾಯ್ಕ ಅವರನ್ನು ಭೇಟಿಯಾಗಿ ವಿನಂತಿಸಲಿದ್ದೇವೆ. ಈ ಯೋಜನೆಯನ್ನು ಅಗತ್ಯತೆ ಇರುವ ಪ್ರದೇಶಕ್ಕೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.
ಗ್ರಾಪಂ ಸದಸ್ಯ ಚಂದ್ರಕಾಂತ ಹೆಗಡೆ, ಸ್ಥಳೀಯ ನಿವಾಸಿ ಚಂದ್ರಕಾಂತ, ಶ್ರೀಕಾಂತ ಹೆಗಡೆ, ಗಣಪತಿ ಭಟ್ ಇತರರಿದ್ದರು.