ಬೆಂಗಳೂರು: ಶ್ರೀ ವಿನಾಯಕ ಮಿತ್ರ ಮಂಡಳಿ ವತಿಯಿಂದ ‘ವಿಜಯವಾಣಿ’ ಸಹಯೋಗದಲ್ಲಿ ಜಯನಗರ 8ನೇ ಹಂತದಲ್ಲಿ ಆಯೋಜಿಸಲಾದ 4 ದಿನಗಳ ‘ವಿನಾಯಕೋತ್ಸವ’ಕ್ಕೆ ಅದ್ದೂರಿ ತೆರೆ ಬಿದ್ದಿದೆ.
ಗುರುವಾರ ‘ಗಣ ಹೋಮ’, ‘ಡ್ರಮ್ ಮತ್ತು ‘ತಾಳವಾದ್ಯ’ ಕಾರ್ಯಕ್ರಮಗಳು ನಡೆದವು. ವ್ನಿೇಶ್ವರನು ಎಲ್ಲರ ಇಷ್ಟಾರ್ಥ ಈಡೇರಿಸಿ ನಾಡಿನಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲು ಶಕ್ತಿ ನೀಡುವಂತೆ ಹಾಗೂ ಎಲ್ಲ ಅಡೆತಡೆಗಳನ್ನು ನಿವಾರಿಸುವಂತೆ ಪುರೋಹಿತರಿಂದ ಗಣಪತಿ ಹೋಮ ನಡೆಸಲಾಯಿತು. ಈ ವೇಳೆ ಸಾವಿರಾರು ಮಂದಿ ಭಕ್ತಿಯಲ್ಲಿ ಮಿಂದೆದ್ದರು. ನಂತರ, ಗಣೇಶ ಗೋವಿಂದಸ್ವಾಮಿ, ಪ್ರಶಾಂತ್ ಮುರುಳೀಧರ್ ನೇತೃತ್ವದ ತಂಡದಿಂದ ನಡೆದ ‘ಡ್ರಮ್ ಮತ್ತು ತಾಳವಾದ್ಯ’ ಪ್ರೇಕ್ಷಕರಿಗೆ ಭರಪೂರ ಮನರಂಜನೆ ಒದಗಿಸಿತು. ಅನ್ನ ಸಂತರ್ಪಣೆ ನಡೆಯಿತು. ಸಂಜೆ ಸಾಂಸ್ಕೃತಿಕ ಕಲಾ ತಂಡದೊಂದಿಗೆ ವಿಜೃಂಭಣೆ ಮೆರವಣಿಗೆ ಮೂಲಕ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು.
ರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು
ಉತ್ಸವದ ಮೊದಲ ದಿನ ರುಕ್ಮಣಿ ನೃತ್ಯ ಶಾಲೆಯ ಸಂಸ್ಥಾಪಕಿ ಹಾಗೂ ನೃತ್ಯಪಟು ಎಚ್.ಎನ್.ಚೈತ್ರಾ ಮತ್ತು ಅವರ ಶಿಷ್ಯೆರಿಂದ ನಡೆದ ಭರತನಾಟ್ಯ ಪ್ರದರ್ಶನ ಮನಸೊರೆಗೊಂಡಿತು. ವಿದುಷಿ ಅನರಾಧಾ ಮಧುಸೂದನ್ ವೀಣಾ ಕಚೇರಿಯನ್ನು ಪ್ರಸ್ತುತಪಡಿಸಿದರು. 2ನೇ ದಿನದಂದು, ಶ್ರೀ ಪ್ರಸ್ತುತಿ ಟ್ರಸ್ಟ್ ವತಿಯಿಂದ ಸಾಮೂಹಿಕವಾಗಿ ಗಣೇಶ ವಂದನೆ ನೆರವೇರಿತು. ‘ಮಜಾ ಟಾಕೀಸ್’ ಖ್ಯಾತಿಯ ಪವನ್ ಕುಮಾರ್ ತಂಡ ನಡೆಸಿಕೊಟ್ಟ ‘ಹಾಸ್ಯ ಸಂಜೆ’ ಪ್ರೇಕ್ಷಕರನ್ನು ನಕ್ಕುನಲಿಸಿತು. 3ನೇ ದಿನದಂದು ಗಾಯಕಿ ಅನುರಾಧಾ ಭಟ್ ಗಾಯನ ನಡೆಸಿಕೊಟ್ಟರು.
ಶಾಸಕ ಸಿ.ಕೆ. ರಾಮಮೂರ್ತಿ, ಮಾಜಿ ಕಾರ್ಪೋರೇಟರ್, ಸ್ಥಳೀಯ ರಾಜಕೀಯ ಮುಖಂಡರು ‘ವಿನಾಯಕೋತ್ಸವ’ಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಹಲವು ಸಹಯೋಗದಲ್ಲಿ ಎಂ.ವಿ. ಕುಮಾರ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದರು.