ರಾಜಧಾನಿಯಲ್ಲಿ ಮನೆಗೊಂದೇ ನಾಯಿ: ಪ್ರತ್ಯೇಕ ಬೈಲಾ ತರಲು ಪಾಲಿಕೆ ನಿರ್ಧಾರ

dog1
Published on

ಬೆಂಗಳೂರು: ರಾಜಧಾನಿಯಲ್ಲಿ ‘ಮನೆಗೊಂದೇ ನಾಯಿ’ ಸಾಕಲು ಪರವಾನಗಿ ಪಡೆಯುವುದು ಸೇರಿ ಇತರ ನಿಯಮಗಳನ್ನು ಜಾರಿಗೆ ತರುವ ವಿಚಾರ ಮತ್ತೆ ಮನ್ನಲೆಗೆ ಬಂದಿದೆ. ಕೆಲ ಮಾನದಂಡಗಳನ್ನು ಬದಲಾಯಿಸಿ, ಹೊಸ ಬೈಲಾ ರಚಿಸಿ ಸರ್ಕಾರಕ್ಕೆ ಸಲ್ಲಿಸಲು ಪಾಲಿಕೆ ಮುಂದಾಗಿದೆ. ಇದರ ಬಗ್ಗೆ ಈಗಾಗಲೆ ಪ್ರಕ್ರಿಯೆ ಶುರುವಾಗಿದ್ದು, ಎಲ್ಲ ಅಂದುಕೊಂಡಂತೆ ನಡೆದರೆ ನಾಯಿ ಸಾಕಲು ಹೊಸ ನಿಯಮ ಜಾರಿಗೆ ಬರಲಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಯಿ ಸಾಕಣೆಗೆ ಸಂಬಂಧಿಸಿದ ಬೈಲಾ ರೂಪಿಸುವ ಪ್ರಯತ್ನ 2012ರಲ್ಲೇ ನಡೆದಿತ್ತು. ಆದರೆ ಜಾರಿಗೆ ಬರಲಿಲ್ಲ. 2018ರಲ್ಲಿ ಈ ಹಳೆಯ ಬೈಲಾವನ್ನು ಪರಿಷ್ಕರಿಸಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿತ್ತು. ಈ ಕುರಿತು ಅಧಿಸೂಚನೆ ರದ್ದುಗೊಳಿಸುವಂತೆ ಕೋರಿ ಕೆಲ ಸಂಘ-ಸಂಸ್ಥೆಗಳು ಕೋರ್ಟ್ ಮೆಟ್ಟಿಲೇರಿದ್ದವು. ಬಳಿಕ ಸರ್ಕಾರ ತನ್ನ ಅಧಿಸೂಚನೆಯನ್ನು ಹಿಂಪಡೆದಿತ್ತು. 2020ರಲ್ಲಿಯೂ ನಾಯಿ ಸಾಕಣೆಗೆ ಪಾಲಿಕೆ ಬೈಲಾ ಜಾರಿಗೆ ಬಂದಿತ್ತು. ಬಿಬಿಎಂಪಿ ಪಶುವೈದ್ಯಕೀಯ ವಿಭಾಗದ ಅಧಿಕಾರಿಗಳು ರೂಪಿಸಿದ್ದ ‘ಸಾಕು ನಾಯಿ ಪರವಾನಗಿ- ಬೈಲಾ 2020’ರ ಕರಡಿನಲ್ಲಿರುವ ಕೆಲ ಅಂಶಗಳಿಗೆ ನಾಯಿಪ್ರಿಯರು ಆಕ್ಷೇಪ ವ್ಯಕ್ತಪಡಿಸಿದ್ದರೆ, ಕೆಲವರು ಬೆಂಬಲ ಸೂಚಿಸಿದ್ದರು. ವಿದೇಶಿ ನಾಯಿಗಳನ್ನು ಮಾರಾಟ ಮಾಡುತ್ತಿರುವವರಿಗೆ ಕಡಿವಾಣ ಹಾಕಲು ಇದು ಅಗತ್ಯವಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದರು.

ನಾಯಿಗಳು ಸಾರ್ವಜನಿಕ ಪ್ರದೇಶಗಳಲ್ಲಿ ಗಲೀಜು ಮಾಡಿದರೆ, ಅದನ್ನು ಮಾಲೀಕರೇ ಸ್ವಚ್ಛಗೊಳಿಸಬೇಕು. ಸಾಕು ನಾಯಿಗೆ ಕಡ್ಡಾಯವಾಗಿ ಸಂತಾನಶಕ್ತಿ ಹರಣ ಶಸಚಿಕಿತ್ಸೆ ಮಾಡಿಸಬೇಕು, ಸಾರ್ವಜನಿಕ ಪ್ರದೇಶಗಳಲ್ಲಿ ಸಾಕುನಾಯಿಗಳನ್ನು ಕರೆದೊಯ್ಯುವಾಗ ಅವುಗಳಿಂದ ತೊಂದರೆ ಉಂಟಾಗದಂತೆ ಕ್ರಮ ವಹಿಸುವುದು ಹಾಗೂ ಮೈಕ್ರೋಚಿಪ್ ಅಳವಡಿಕೆ ಸೇರಿ ಇತರ ಅಂಶಗಳನ್ನು ಬೈಲಾದಲ್ಲಿ ಪ್ರಸ್ತಾಪಿಸಲಾಗಿತ್ತು. ಅಲ್ಲದೆ, ಅಕ್ಕಪಕ್ಕದ ನಿವಾಸಿಗಳಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಅಪಾರ್ಟ್‌ಮೆಂಟ್ ಸೇರಿ ಅನೇಕ ಕುಟುಂಬಗಳು ಒಟ್ಟಿಗೆ ವಾಸಿಸುತ್ತಿರುವ ವಸತಿ ಸಮುಚ್ಛಯಗಳಲ್ಲಿ ಡಾಬರ್‌ಮನ್, ಜರ್ಮನ್ ಶೆರ್ಡ್, ರಾಟ್‌ವೆಯ್ಲರ್, ಹೌಂಡ್ ಸೇರಿ ಮುಂತಾದ ಅಕ್ರಮಣಕಾರಿ ತಳಿಯ ನಾಯಿಗಳನ್ನು ಸಾಕುವುದು ಬೇಡ ಎಂದು ಶಿಾರಸು ಮಾಡಲಾಗಿತ್ತು. ಆದರೂ, ಕೆಲ ಕಾರಣಾಂತರಗಳಿಂದ ಈ ನಿಯಮ ಜಾರಿಗೆ ಬರಲಿಲ್ಲ. ಈ ಬಾರಿ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿರುವ ಪಾಲಿಕೆ, ಜನರಿಂದ ಪಡೆದಿರುವ ಆಕ್ಷೇಪಣೆ ವಿಲೇವಾರಿ ಸೇರಿ ಇತರ ಮಾನದಂಡಗಳನ್ನು ಅಳವಡಿಸಿ ನಿಯಮಗಳನ್ನು ಜಾರಿಗೆ ತರಲು ಆಲೋಚಿಸಿದೆ. ನಾಯಿ ಸಾಕುವ ಬಗ್ಗೆ ಪ್ರಾಣಿಪ್ರಿಯರದ್ದು ಒಂದು ವಾದವಾದರೆ, ನಾಯಿಗಳ ಬಗ್ಗೆ ಭಯ ಹೊಂದಿರುವವರದ್ದು ಇನ್ನೊಂದು ವಾದ. ಎರಡೂ ಕಡೆಯವರಿಂದ ಅಭಿಪ್ರಾಯ, ಸಲಹೆಗಳನ್ನು ಪಡೆದು ಸಾಧಕ-ಬಾಧಕಗಳ ಬಗ್ಗೆ ಅಳವಾಗಿ ಅಧ್ಯಯನ ನಡೆಸಲು ನಿರ್ಧರಿಸಿದೆ.

ನಾಯಿ ಸಾಕುವವರ ಸಂಖ್ಯೆ ಹೆಚ್ಚಳ

ವರ್ಷದಿಂದ ವರ್ಷಕ್ಕೆ ಸಿಲಿಕಾನ್ ಸಿಟಿಯಲ್ಲಿ ಶ್ವಾನ ಸಾಕುವವರ ಸಂಖ್ಯೆ ಹೆಚ್ಚಳವಾಗಿದೆ. ಲಕ್ಷಕ್ಕೂ ಅಧಿಕ ಸಾಕು ನಾಯಿಗಳಿವೆ. ಕೆಲ ಮನೆಯಲ್ಲಿ 3-4 ಇವೆ. ಕೆಲವರು ಸಾಕು ನಾಯಿಗಳ ಮಾರಾಟವನ್ನೇ ಬುಸಿನೆಸ್ ಮಾಡಿಕೊಂಡಿದ್ದಾರೆ. ವಿವಿಧ ತಳಿಗಳ ಖರೀದಿ ಮತ್ತು ಮಾರಾಟ ಪ್ರಕ್ರಿಯೆಯೂ ಹೆಚ್ಚಾಗುತ್ತಿದೆ. ಅಲ್ಲದೆ, ಸಾವಿರಾರು ರೂಪಾಯಿ ಕೊಟ್ಟು ದೇಶಿ ವಿದೇಶಿ ತಳಿಯ ನಾಯಿಗಳನ್ನು ತಂದು ಸಾಕಲಾಗುತ್ತಿದೆ. ಇವುಗಳನ್ನು ವಾಯುವಿಹಾರಕ್ಕೆ ಕರೆದುಕೊಂಡು ಹೋಗುವುದು, ಎಲ್ಲೆಂದರಲ್ಲಿ ಮಲ/ಮೂತ್ರ ಮಾಡಿಸುವುದು ನಡೆದಿದೆ. ಸದ್ಯ ನಾಯಿ ಸಾಕಲು ಪರವಾನಗಿ ಬೇಕಿಲ್ಲ. ಇದು ಕಡ್ಡಾಯವಾಗಿಲ್ಲ. ಇನ್ನುಮುಂದೆ ಸ್ಥಳೀಯ ಅಧಿಕಾರಿಗಳಿಂದ ಕಡ್ಡಾಯವಾಗಿ ಅನುಮತಿ ಪಡೆಯುವುದು ಸೇರಿ ಇತರ ನಿಯಮಗಳು ಜಾರಿಗೆ ಬರಲಿವೆ.

ಪ್ರಮುಖ ಮಾನದಂಡಗಳು

* ಒಂದು ಮನೆಗೆ ಒಂದೇ ನಾಯಿ ಸಾಕಣೆ

* ಪಾಲಿಕೆಯಲ್ಲಿ ಶುಲ್ಕ ಕಟ್ಟಿ ಪರವಾನಗಿ ಪಡೆಯುವುದು ಕಡ್ಡಾಯ

* ನಿರ್ದಿಷ್ಟ ದೈತ್ಯ ನಾಯಿ, ದೊಡ್ಡ, ಮಧ್ಯಮ ಮತ್ತು ಸಣ್ಣ ತಳಿಗಳ ಆಧಾರದ ಮೇಲೆ ಶುಲ್ಕ ನಿಗದಿ

* ಲೈಸೆನ್ಸ್ ಪಡೆದ ನಾಯಿಗೆ ನಿರ್ದಿಷ್ಟ ಸಂಖ್ಯೆ ನೀಡಿಕೆ

* ಪ್ರತಿ ವರ್ಷ ಪರವಾನಗಿ ನವೀಕರಣ

* ಸಾಕುಪ್ರಾಣಿಗೆ ಸ್ವಂತ ವೆಚ್ಚದಲ್ಲಿ ಮಾಲೀಕರಿಂದಲೇ ಮೈಕ್ರೋ ಚಿಕ್ ಅಳವಡಿಕೆ

* ಮೈಕ್ರೋ ಚಿಪ್‌ನಲ್ಲಿ ನಾಯಿಯ ತಳಿ, ಮಾಲೀಕರ ವಿಳಾಸ, ಲಸಿಕೆ ಪಡೆದ ಮಾಹಿತಿ ಲಭ್ಯ

* ಜಂತುನಾಶಕ ಔಷಧ, ರೇಬಿಸ್, ಕೆನೈಡ್ ಡಿಸ್ಟೆಂಪರ್ ಸೇರಿ ಮುಂತಾದ ರೋಗಗಳ ವಿರುದ್ಧ ಲಸಿಕೆ ಹಾಕಿಸಬೇಕು

* ಸಾಕು ನಾಯಿಗಳನ್ನು ಬೀದಿಗೆ ಬಿಡುವಂತಿಲ್ಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net