ಸಾಂದರ್ಭಿಕ ಚಿತ್ರ 
ಜಿಲ್ಲೆ

ಈ ರೋಗ ಮಕ್ಕಳಲ್ಲಿ ಕಂಡುಬಂದಿರುವುದು ಇದೇ ಮೊದಲು!; ಇದರಲ್ಲಿ ಶೇ. 60ರಷ್ಟಿದೆ ಸಾವಿನ ಸಾಧ್ಯತೆ!

Webdesk - Ravikanth

ದಾವಣಗೆರೆ: ವಯಸ್ಕರನ್ನು ಕಾಡುತ್ತಿದ್ದ ಒಂದು ತೀವ್ರ ಥರದ ರೋಗವೊಂದು ಇದೀಗ ಮೊದಲ ಸಲ ಮಕ್ಕಳಲ್ಲಿ ಕಂಡುಬಂದಿದ್ದು, ಆತಂಕ ಸೃಷ್ಟಿಸಿದೆ. ಅದರಲ್ಲೂ ರಾಜ್ಯದ ಬಾಲಕನೊಬ್ಬನಲ್ಲಿ ಈ ಪ್ರಕರಣ ಕಂಡುಬಂದಿದ್ದು, ಈ ರೋಗ ಮಕ್ಕಳಲ್ಲಿ ಕಂಡುಬಂದಿರುವುದು ಇದೇ ಮೊದಲು ಎನ್ನಲಾಗಿದೆ.

ದಾವಣಗೆರೆಯ ಎಸ್​.ಎಸ್​.ವೈದ್ಯಕೀಯ ಸಂಶೋಧನಾ ಕೇಂದ್ರ ಈ ಪ್ರಕರಣವನ್ನು ಪತ್ತೆ ಹಚ್ಚಿದೆ. ಎಸ್.ಎಸ್. ಹೈಟೆಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ 13 ವರ್ಷದ ಬಾಲಕನಲ್ಲಿ ಈ ರೋಗ ಕಾಣಿಸಿದ್ದು, ಈತ ಇಂಥ ಕಾಯಿಲೆಗೀಡಾದ ಮೊದಲ ಬಾಲಕ ಎನಿಸಿಕೊಂಡಿದ್ದಾನೆ. ಅಕ್ಯೂಟ್​ ನೆಕ್ಟ್ರೋಟೈಜಿಂಗ್ ಎನ್​ಸೆಫಲೋಪಥಿ ಆಫ್​ ಚೈಲ್ಡ್​ಹುಡ್ ಎಂಬ ಹೆಸರಿನ ಈ ಕಾಯಿಲೆಯನ್ನು ಚಿಕ್ಕದಾಗಿ ಅನೆಕ್​ (ANEC) ಎಂದು ಕರೆಯಲಾಗುತ್ತಿದೆ. ದೊಡ್ಡವರಲ್ಲಿ ಕಾಣಿಸಿಕೊಳ್ಳುವ ಅನೆಕ್​ ಹಾಗೂ ಮಿಸ್​-ಸಿ (ಮಲ್ಟಿಸಿಸ್ಟಮ್​ ಇನ್​ಫ್ಲೇಮೇಟರಿ ಸಿಂಡ್ರೋಮ್​ ಇನ್​ ಚಿಲ್ಡ್ರನ್) ಈಗ ಮಕ್ಕಳಲ್ಲೂ ಕಾಣಿಸಿಕೊಂಡಿರುವುದ ಆತಂಕ ಉಂಟುಮಾಡಿದೆ.

ವಯಸ್ಕರಲ್ಲಿ ಕಾಣಿಸಿಕೊಳ್ಳುತ್ತಿದ್ದ ಅನೆಕ್ ಈಗ ಮಕ್ಕಳಲ್ಲಿ ಕಂಡುಬಂದಿದೆ. ಈ ಕಾಯಿಲೆಯಿಂದ ಬಹುಅಂಗಾಂಗ ವೈಫಲ್ಯ ಉಂಟಾಗುವ ಸಾಧ್ಯತೆ ಇರುತ್ತದೆ. ಮಾತ್ರವಲ್ಲ ಈ ಪ್ರಕರಣದಲ್ಲಿ ಸಾವು ಸಂಭವಿಸುವ ಸಾಧ್ಯತೆ ಶೇ. 60 ಇರುತ್ತದೆ ಎಂದು ಎಸ್​.ಎಸ್​. ವೈದ್ಯಕೀಯ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ನಿಜಲಿಂಗಪ್ಪ ಕಾಳಪ್ಪನವರ ತಿಳಿಸಿದ್ದಾರೆ.

ಫೆಬ್ರವರಿಯಿಂದಲೇ ಈ ಕಾಯಿಲೆ ಪತ್ತೆಯಾಗಿದ್ದು, ಮಕ್ಕಳಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದೆ. ದೆಹಲಿ ಏಮ್ಸ್​ನಲ್ಲಿ ಈ ಕಾಯಿಲೆ ವಯಸ್ಕರೊಬ್ಬರಲ್ಲಿ ಕಂಡುಬಂದಿತ್ತು. ಕರೊನಾ ಸೋಂಕು ತಗುಲಿ ಗುಣಮುಖರಾದ ಮಕ್ಕಳನ್ನು ಈ ಕಾಯಿಲೆ ಬಾಧಿಸುವ ಸಾಧ್ಯತೆ ಇರುತ್ತದೆ. ಅನೆಕ್​ ಪೀಡಿತ ಮಕ್ಕಳಿಗೆ ಇಮ್ಯುನೋಗ್ಲೋಬಿನ್ ಚುಚ್ಚುಮದ್ದೇ ಔಷಧ. ಮಗುವಿನ ತೂಕದ ಆಧಾರದ ಮೇರೆಗೆ ಈ ಚುಚ್ಚುಮದ್ದು ನೀಡಲಾಗುತ್ತದೆ. ಈ ಚಿಕಿತ್ಸೆಗೆ 75 ಸಾವಿರದಿಂದ 1 ಲಕ್ಷ ರೂ. ವರೆಗೆ ವೆಚ್ಚವಾಗುವ ಸಾಧ್ಯತೆ ಇರುತ್ತದೆ ಎಂದು ಅವರು ತಿಳಿಸಿದ್ದಾರೆ.