| ಬಿ.ಉಮೇಶ್ನಾಯ್ಕ್ ತರೀಕೆರೆ
ಸರ್ಕಾರಿ ಭೂಮಿ ಕಬಳಿಕೆ ಹೊಸದಲ್ಲ. ಆದರೆ ಇಲ್ಲೊಬ್ಬ ಗ್ರಾಮವನ್ನೇ ದಾನಪತ್ರದ ಮೂಲಕ ತನ್ನ ಹೆಸರಿಗೆ ಖಾತೆ ಮಾಡಿಸಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ನ.15ರವರೆಗೆ ಶ್ರೀ ಕೂಡಲಿ ಅಕ್ಷೋಭ್ಯ ತೀರ್ಥ ಮಠದ ಹೆಸರಿನಲ್ಲಿದ್ದ ಕಟ್ಟೇಹೊಳೆ (ಪಿರಮೇನಹಳ್ಳಿ) ಗ್ರಾಮದ ಆಸ್ತಿಯು ಇದೀಗ ಗ್ರಾಮದ ಒಬ್ಬನ ಸ್ವತ್ತಾಗಿದೆ. ಸಂಘಟನೆಯೊಂದರ ಮುಖಂಡನಾಗಿರುವ ಈತ 25ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿರುವ ಗ್ರಾಮವನ್ನು ಸ್ವಂತಕ್ಕೆ ಬರೆಸಿಕೊಂಡಿರುವುದು ದಾಖಲೆಗಳಿಂದ ಬಹಿರಂಗವಾಗಿದೆ. ಪಟ್ಟಣದ ಹಳೇ ಬಿ.ಎಚ್.ರಸ್ತೆ ಪಕ್ಕದ ಸ.ನಂ.6/5ರ 1.21 ಎಕರೆ ಹಾಗೂ ಸ.ನಂ 7ರ 1.18 ಎಕರೆ ಜಾಗವನ್ನು ಕಟ್ಟೇಹೊಳೆ ಗ್ರಾಮ ಹೊಂದಿದೆ. ಗ್ರಾಮದಲ್ಲಿ ಆರೇಳು ದಶಕಗಳಿಂದ ಜನರು ವಾಸಿಸುತ್ತಿದ್ದಾರೆ. ಸ.ನಂ. 6/5ರಲ್ಲಿ ಹೊಸ ಮನೆಗಳು ನಿರ್ವಣವಾಗುತ್ತಿದ್ದಂತೆ ಭೂಗಳ್ಳನ ಕಣ್ಣು ಗ್ರಾಮದ ಉಳಿದ ಜಾಗದ ಮೇಲೂ ಬಿದ್ದಿದೆ.
ಶ್ರೀ ಕೂಡಲಿ ಅಕ್ಷೋಭ್ಯ ತೀರ್ಥ ಮಠದ ಮೇಲಿನ ಶ್ರದ್ಧೆ, ಸೇವೆ ಪರಿಗಣಿಸಿ ಮಠದ ಆಸ್ತಿಯ ಜಿಪಿಎ ಹೋಲ್ಡರ್ ವಂಶಪಾರಂಪರ್ಯವಾಗಿ ಆಸ್ತಿ ಅನುಭವಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ದಾನಪತ್ರದಲ್ಲಿ ಉಲ್ಲೇಖಿಸಲಾಗಿದೆ. ವಾಸ್ತವದಲ್ಲಿ ಮಠಕ್ಕೂ ಭೂಗಳ್ಳನಿಗೂ ಯಾವುದೇ ಸಂಬಂಧವಿಲ್ಲ. ಮಠಕ್ಕೆ ಸೇರಿದ ಲಕ್ಷಾಂತರ ರೂ. ಮೌಲ್ಯದ ಆಸ್ತಿಯನ್ನು ದಾನದ ಮೂಲಕ ತನ್ನದಾಗಿಸಿಕೊಂಡಿದ್ದಾನೆ. ದಾನಪತ್ರದ ವಿಷಯ ಬಯಲಾಗುತ್ತಿದ್ದಂತೆಯೇ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಜನರಿಗೆ ಎದುರಾಗಿರುವ ಸಂಕಷ್ಟ ನಿವಾರಿಸಬೇಕಿದೆ.
ಅಧಿಕಾರಿಗಳೂ ಶಾಮೀಲು: ಭೂಗಳ್ಳ ಶ್ರೀ ಕೂಡಲಿ ಅಕ್ಷೋಭ್ಯ ತೀರ್ಥ ಮಠದ ಆಸ್ತಿಯನ್ನು ಜನರಲ್ ಪವರ್ ಆಫ್ ಅಟಾರ್ನಿ(ಜಿಪಿಎ ಹೋಲ್ಡರ್) ಪತ್ರದ ಮೂಲಕ ಅಧಿಕಾರ ಹೊಂದಿರುವ ವಿಜಯಪುರ ಮೂಲದ ವ್ಯಕ್ತಿ. ತರೀಕೆರೆ ಕಂದಾಯ ಇಲಾಖೆ ಅಧಿಕಾರಿಗಳೂ ಕೈಜೋಡಿಸಿದ್ದಾರೆ. ಹತ್ತಾರು ಮನೆಗಳಿರುವ ಜಾಗದ ಬೆಳೆ ಕಾಲಂನಲ್ಲಿ ಮಣ್ಣಿನ ಗುಣ ಮರಳು ಮಿಶ್ರಿತ ಎಂಬ ಜಾಗದಲ್ಲಿ ಕಪ್ಪು ಮುಣ್ಣು, ಬಾಗಾಯ್ತು ಕಾಲಂನಲ್ಲಿ ಖುಷ್ಕಿ ಜಮೀನಿಗೆ ಬದಲಾಗಿ ತರಿ, ಅಡಕೆ ಬೆಳೆ ಜತೆ ಕೊಳವೆ ಬಾವಿ ಇದೆ ಎಂದು ನಮೂದಿಸಿದ್ದಾರೆ.
ಸರ್ಕಾರದಿಂದ ಸೌಲಭ್ಯ: ಮನೆ ನಿರ್ವಣವಾಗಿ ಆರೇಳು ದಶಕ ಕಳೆದಿರುವ ಪಿರಮೇನಹಳ್ಳಿಯಲ್ಲಿ ಸರ್ಕಾರ ಕುಡಿಯುವ ನೀರು, ಬೀದಿ ದೀಪ, ರಸ್ತೆ, ಚರಂಡಿ ವ್ಯವಸ್ಥೆ ಮಾಡಿದೆ. ಜತೆಗೆ ಪ್ರತಿ ಮನೆಗೂ ಬೇಲೇನಹಳ್ಳಿ ಗ್ರಾಪಂ ಕಂದಾಯ ವಿಧಿಸಿ ಪ್ರತಿವರ್ಷ ಕರ ವಸೂಲಿ ಮಾಡುತ್ತ ಬಂದಿದೆ. ಇಷ್ಟಾದರೂ ಈವರೆಗೆ ಗ್ರಾಮ ಮಠದ ಹೆಸರಿನಲ್ಲೇ ಇತ್ತು.
ಪೇಚಿಗೆ ಸಿಲುಕಿದ ವಂಚಕ: ಪಿರಮೇನಹಳ್ಳಿ ಮನೆ ಮಾಲೀಕರ ಗಮನಕ್ಕೆ ಬಾರದೆಯೇ ತನ್ನ ಹೆಸರಿಗೆ ಗ್ರಾಮವನ್ನು ಖಾತೆ ಮಾಡಿಸಿಕೊಂಡಿರುವ ವಿಷಯ ಬಹಿರಂಗವಾಗುತ್ತಿದ್ದಂತೆ ಭೂಗಳ್ಳ ಪೇಚಿಗೆ ಸಿಲುಕಿದ್ದಾನೆ. ಗ್ರಾಮದವರು ಪ್ರಶ್ನಿಸಿದಾಗ ನನ್ನಿಂದ ತಪ್ಪಾಗಿದೆ. ಸರಿಪಡಿಸುವೆ ಎಂದು ಹೇಳಿ ಜನರನ್ನು ನಂಬಿಸುವ ಪ್ರಯತ್ನ ಮಾಡುತ್ತಿದ್ದಾನೆ.
ಗ್ರಾಮದ ವಸ್ತುಸ್ಥಿತಿ ಅರಿಯಲು ತಕ್ಷಣವೇ ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ಅವರನ್ನು ಕಟ್ಟೇಹೊಳೆ ಗ್ರಾಮಕ್ಕೆ ಕಳಿಸಿಕೊಡಲಾಗುವುದು. ಪ್ರಕರಣದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳ ಕೈವಾಡ ಇದೆಯೇ ಎಂಬುದನ್ನು ಪರಿಶೀಲಿಸಿ ವರದಿ ನೀಡಲು ಸೂಚಿಸಲಾಗುವುದು.
| ಬಿ.ಆರ್. ರೂಪಾ ಎಡಿಸಿ
ಪಿರಮೇನಹಳ್ಳಿ ಗ್ರಾಮವೇ ಮಠದ್ದು ಎಂಬುದು ನಿಜ. ಅದನ್ನು ನಾವು ಯಾರಿಗೂ ದಾನ ಕೊಟ್ಟಿಲ್ಲ. ವಶಕ್ಕೆ ಪಡೆಯಲು ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ಆದರೆ ಸ್ಥಳೀಯರು ಹಾಗೂ ಅಧಿಕಾರಿಗಳು ಸಹಕಾರ ನೀಡಲಿಲ್ಲ. ಹಾಗಾಗಿ ಜಾಗವೆಲ್ಲ ಅತಿಕ್ರಮಣವಾಗಿದೆ. ಮಠದ ಜಾಗವನ್ನು ಇನ್ನು ದೇವರೇ ಮರಳಿ ಕೊಡಿಸಬೇಕು.
| ವಾದಿರಾಜಾಚಾರ್ ಕೂಡಲಿ ಅಕ್ಷೋಭ್ಯ ಮಠದ ದಿವಾನರು
ಮಠದಿಂದ ಕರ ವಸೂಲಿ: ಗ್ರಾಮದ ಜಮೀನು ಮಠದ ಅಧೀನದಲ್ಲಿರುವವರೆಗೂ ಪ್ರತಿ ವರ್ಷ ಕಂದಾಯ ಕಾಣಿಕೆ ವಸೂಲಿ ಮಾಡಲಾಗುತ್ತಿತ್ತು. ವರ್ಷವೊಂದಕ್ಕೆ ಪ್ರತಿ ಮನೆಗೆ 2 ರೂ.ನಂತೆ ಕಂದಾಯ, ದವಸ ಧಾನ್ಯ ಕೂಡ ನೀಡಲಾಗುತ್ತಿತ್ತು. ಈ ಹಿಂದೆ ಸರ್ಕಾರ ಶ್ರೀ ಕೂಡಲಿ ಅಕ್ಷೋಭ್ಯ ತೀರ್ಥ ಮಠಕ್ಕೆ ಪಿರಮೇನಹಳ್ಳಿ ಗ್ರಾಮದಲ್ಲಿರುವ ಜಮೀನಿಗೆ ಸಂಬಂಧಿಸಿದ ಪರಿಹಾರವನ್ನು ಎಲ್ಆರ್ಟಿ ಅಡಿಯಲ್ಲಿ ಸಂದಾಯ ಮಾಡಿದೆ.
ಗ್ರಾಮದ ಜಾಗ ಮಠದ ಅಧೀನದಲ್ಲಿದ್ದರೂ ಆರೇಳು ದಶಕಗಳಿಂದ ಸ್ವತಂತ್ರವಾಗಿ ಜೀವಿಸುತ್ತಿದ್ದ ಜನರಿಗೆ ಈ ಘಟನೆ ಅರಗಿಸಿಕೊಳ್ಳ ಲಾಗದು. ಅಧಿಕಾರಿಗಳು ಎಚ್ಚೆತ್ತುಕೊಂಡು ಗ್ರಾಮಸ್ಥರಿಗೆ ನ್ಯಾಯ ದೊರಕಿಸಿಕೊಡಬೇಕು.
| ಆರ್. ಬಲರಾಮ್ ಪಿರಮೇನಹಳ್ಳಿ ಗ್ರಾಪಂ ಸದಸ್ಯ
ಶುಲ್ಕದಿಂದ ತಪ್ಪಿಸಿಕೊಳ್ಳುವ ತಂತ್ರ?: ಜಿಪಿಎ ಹೋಲ್ಡರ್ ಹಾಗೂ ಗ್ರಾಮದಲ್ಲಿ ಮನೆ ನಿರ್ವಣವಾಗಿರುವ ಜಮೀನು ದಾನಪತ್ರದ ಮೂಲಕ ದಕ್ಕಿಸಿಕೊಂಡಿರುವ ಭೂಗಳ್ಳ ಗ್ರಾಮವನ್ನು ತನ್ನ ಹೆಸರಿಗೆ ಬರೆಸಿಕೊಳ್ಳಲು ಖರೀದಿ ಬದಲು ದಾನ ಎಂದು ಬರೆಸಿಕೊಂಡು ಸುಲಭವಾಗಿ ಭೂಮಿ ಕಬಳಿಸುವ ಮತ್ತು ಸರ್ಕಾರಕ್ಕೆ ಕಟ್ಟಬೇಕಿದ್ದ ನೋಂದಣಿ ಶುಲ್ಕ ವಂಚಿಸುವ ತಂತ್ರ ನಡೆಸಿರುವ ಸಾಧ್ಯತೆ ಇದೆ. ಮುದ್ರಾಂಕ ಶುಲ್ಕ ವಂಚಿಸುವ ಪ್ರಯತ್ನವೂ ಇಲ್ಲಿ ನಡೆದಿರುವ ಸಾಧ್ಯತೆಗಳಿವೆ. ಮಠವಾಗಲೀ ಅಥವಾ ಮಠಕ್ಕೆ ಸಂಬಂಧಿಸಿದ ವ್ಯಕ್ತಿಯಾಗಲಿ ಮಠಕ್ಕೆ ಸೇರಿದ ಆಸ್ತಿ ಸಂರಕ್ಷಿಸಬೇಕೇ ಹೊರತು ದಾನ ನೀಡುವ ಹಕ್ಕು ಹೊಂದಿರುವುದಿಲ್ಲ. ಒಂದು ವೇಳೆ ದಾನ ಬರೆಯುವುದಾದರೆ ಆ ವ್ಯಕ್ತಿಯ ಸ್ವಂತ ಆಸ್ತಿ ಆಗಿರಬೇಕು ಎಂಬುದು ಕಾನೂನಿನಲ್ಲಿದೆ. ಆದರೆ ಇಲ್ಲಿ ಮಠದಿಂದ ದಾನಪತ್ರ ಬರೆದಿರುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ.