ಸಾಂದರ್ಭಿಕ ಚಿತ್ರ  
ಜಿಲ್ಲೆ

ಮನೆಯವರು ಒಳಗಿರುವಾಗಲೇ ಹೊರಗಿನಿಂದ ಬೀಗ ಹಾಕಿದ ಕಳ್ಳರು; ರಾತ್ರಿ ಬೆಳಗಾಗುವುದರೊಳಗೆ ದುಬಾರಿ ಬೈಕ್​ ಕಳವು!

ದೇವನಹಳ್ಳಿ: ಮನೆಯಲ್ಲಿ ಯಾರೂ ಇಲ್ಲದಾಗ ಕಳ್ಳತನ ನಡೆಯುವುದು ಸರ್ವೇಸಾಮಾನ್ಯ. ಆದರೆ ಇಲ್ಲೊಂದು ಕಡೆ ಮನೆಯವರು ಇರುವಾಗಲೇ ಹೊರಗಿನಿಂದ ಬೀಗ ಹಾಕಿದ ಕಳ್ಳರು, ರಾತ್ರಿ ಬೆಳಗಾಗುವುದರೊಳಗೆ ದುಬಾರಿ ಬೈಕ್​ವೊಂದನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನಹಳ್ಳಿ ಗ್ರಾಮದಲ್ಲಿ ಈ ಕಳ್ಳತನ ಸಂಭವಿಸಿದೆ. ಇಲ್ಲಿನ ನಿವಾಸಿ ಲಿಖಿತ್ ಗೌಡ ಎಂಬವರು ಬೈಕ್​ ಕಳೆದುಕೊಂಡವರು. ಇವರು ಆರು ತಿಂಗಳ ಹಿಂದಷ್ಟೇ ಸುಮಾರು ಎರಡೂವರೆ ಲಕ್ಷ ರೂಪಾಯಿ ಕೊಟ್ಟು ಕೆಟಿಎಂ 350 ಆರ್ ಬೈಕ್ ಖರೀದಿಸಿದ್ದಾಗಿ ಹೇಳಿಕೊಂಡಿದ್ದಾರೆ.

ನಿನ್ನೆ ರಾತ್ರಿ ಮನೆಯವರು ಇರುವಾಗಲೇ ಬೀಗ ಹಾಕಿದ್ದ ಕಳ್ಳರು, ಮನೆ ಮುಂದೆ ನಿಲ್ಲಿಸಿದ್ದ ಕೆಟಿಎಂ ಬೈಕ್ ಕದ್ದುಕೊಂಡು ಹೋಗಿದ್ದಾರೆ. ಇನ್ನು ಮೂರು ಬೈಕ್ ಹಾಗೂ ಟ್ರ್ಯಾಕ್ಟರ್ ಇದ್ದರೂ ದುಬಾರಿ ಬೆಲೆಯ ಬೈಕನ್ನು ಮಾತ್ರ ಕಳವು ಮಾಡಿಕೊಂಡು ಹೋಗಿದ್ದಾರೆ.

ಬೆಳಗ್ಗೆ ಮನೆಯವರು ಬೀಗ ಮುರಿಸಿ ಹೊರಗಡೆ ಬಂದು ನೋಡಿದಾಗ ಕಳ್ಳತನ ಆಗಿರುವುದು ಗಮನಕ್ಕೆ ಬಂದಿದೆ. ಇನ್ನು ಈ ಪ್ರದೇಶದಲ್ಲಿ ಕಳೆದ ಎರಡು ವಾರಗಳಲ್ಲಿ 15ಕ್ಕೂ ಹೆಚ್ಚು ಅಂಗಡಿಗಳಲ್ಲೂ ಕಳ್ಳತನ ಆಗಿರುವುದು ಸ್ಥಳೀಯರ ನಿದ್ದೆಗೆಡಿಸಿದೆ. ಬೈಕ್ ಕಳವು ಪ್ರಕರಣ ಸಂಬಂಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.