ಜಿಲ್ಲೆ

ವಿಮಾನದಲ್ಲೇ ಬಂದಿಳಿಯುತ್ತಿದ್ದರು, ಲಾಡ್ಜ್​​ನಲ್ಲೇ ತಂಗಿರುತ್ತಿದ್ದರು; ಆಮೇಲೆ ಈ ಇಬ್ಬರು ಮಾಡುತ್ತಿದ್ದುದು ಏನು ಗೊತ್ತಾ?

ಬೆಂಗಳೂರು: ಇವರಿಬ್ಬರು ವಿಮಾನದಲ್ಲೇ ಬಂದಿಳಿಯುತ್ತಿದ್ದರು, ಲಾಡ್ಜ್​ನಲ್ಲೇ ತಂಗುತ್ತಿದ್ದರು. ಮಾತ್ರವಲ್ಲ ಸುಲಭದಲ್ಲಿ ಐಷಾರಾಮಿ ಜೀವನ ಸಾಗಿಸುತ್ತಿದ್ದರು. ಆದರೆ ಇವರು ಮಾಡುತ್ತಿದ್ದುದು ಏನು ಅಂತ ಗೊತ್ತಾಗಿದ್ದು ಮಾತ್ರ ಇವರು ಸಿಕ್ಕಿಬಿದ್ದ ಮೇಲೆಯೇ..!

ಹೌದು.. ಉತ್ತರ ಭಾರತದ ಮೂಲದ ಇಬ್ಬರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಸಮರ್​​ಜಿತ್ ಸಿಂಗ್ ಮತ್ತು ರಾಜ್​ಕುಮಾರ್ ಬಂಧಿತ ಆರೋಪಿಗಳು. ಇವರಿಬ್ಬರನ್ನು ಬೆಂಗಳೂರಿನ ಸುಬ್ರಹ್ಮಣ್ಯಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತರಾಗಿರುವ ಈ ಆರೋಪಿಗಳು ಬೆಂಗಳೂರಿಗೆ ವಿಮಾನದಲ್ಲಿ ಬಂದಿಳಿದು, ಓಯೊ ಆ್ಯಪ್ ಮೂಲಕ ಲಾಡ್ಜ್​ನಲ್ಲಿ ನೆಲೆಸುತ್ತಿದ್ದರು. ಬಳಿಕ ನಗರದಲ್ಲಿನ ಎಟಿಎಮ್​ಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದರು. ಗ್ಯಾಸ್​ ಕಟ್ಟರ್ ಬಳಸಿ ಕಳ್ಳತನ ನಡೆಸುತ್ತಿದ್ದ ಇವರು ಇತ್ತೀಚೆಗೆ ಬೆಂಗಳೂರಿನ ಉತ್ತರಹಳ್ಳಿಯ ಕೆನರಾ ಬ್ಯಾಂಕ್ ಎಟಿಎಮ್​ಗೆ ಕನ್ನ ಹಾಕಿ 17 ಲಕ್ಷ ರೂ. ಎಗರಿಸಿದ್ದರು.

ಬಂಧಿತರ ವಿರುದ್ಧ ಬ್ಯಾಟರಾಯನಪುರ, ಪೀಣ್ಯ ಪೊಲೀಸ್​ ಠಾಣೆಯಲ್ಲೂ ಪ್ರಕರಣ ದಾಖಲಾಗಿದ್ದು, ಸದ್ಯ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಇವರಿಬ್ಬರನ್ನು ಪೊಲೀಸರು ಮತ್ತಷ್ಟು ವಿಚಾರಣೆಗೆ ಒಳಪಡಿಸುತ್ತಿದ್ದು, ಇನ್ನಷ್ಟು ಮಾಹಿತಿ ಸದ್ಯದಲ್ಲೇ ಹೊರಬೀಳುವ ಸಾಧ್ಯತೆ ಇದೆ.