ಜಿಲ್ಲೆ

ಬೆಟ್ಟದ ಒಡೆತನಕ್ಕಾಗಿ ಗ್ರಾಮಸ್ಥರಿಗೆ ಕಾಟ: ಕೆರೆ ಕಾಮೇಗೌಡರ ವಿರುದ್ಧ ಕೇಳಿಬಂದ ಪ್ರಮುಖ ಆರೋಪಗಳಿವು

ಮಂಡ್ಯ/ಮಳವಳ್ಳಿ: ಅರಣ್ಯ ಪ್ರದೇಶವೇ ತನ್ನದೆಂಬಂತೆ ದರ್ಪ ಪ್ರದರ್ಶನ ಮಾಡುತ್ತ, ಗ್ರಾಮದ ಜನರಿಗೆ ಕಿರುಕುಳ ನೀಡುತ್ತಿರುವ ಕಾಮೇಗೌಡರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮಸ್ಥರು ಸೋಮವಾರ ಸಂಜೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.  ‘ಕೆರೆ ಕಾಮೇಗೌಡ’ ಎಂದೇ ಖ್ಯಾತಿ ಗಳಿಸಿರುವ ಕಾಮೇಗೌಡರ ಬಗ್ಗೆ ಇದೀಗ ಹಲವು ಅನುಮಾನ-ಆರೋಪಗಳು ಎದ್ದಿವೆ.

ಆರೋಪಗಳೇನು?

  1. ಬೇರೆಯವರು ಬೆಟ್ಟಕ್ಕೆ ಬರಬಾರದು, ದನ -ಕರುಗಳನ್ನು ಬಿಡಬಾರದು ಎಂದು ಕಾಮೇಗೌಡರು ಗ್ರಾಮಸ್ಥರ ಜತೆ ಜಗಳವಾಡುತ್ತಿದ್ದರಿಂದ ಬೇಸತ್ತಿದ್ದ ಜನ ಬೆಟ್ಟದಲ್ಲಿ ದನ ಮೇಯಿಸುವುದನ್ನು ನಿಲ್ಲಿಸಿದ್ದರು. ಬೆಟ್ಟದಲ್ಲಿ ಗಿಡಮರಗಳನ್ನು ಹಾಳು ಮಾಡುತ್ತಾರೆ. ಹಾಗಾಗಿ ಇಲ್ಲಿ ದನ ಮೇಯಿಸಲು ಅವಕಾಶ ನೀಡುತ್ತಿರಲಿಲ್ಲ ಎಂಬುದು ಕಾಮೇಗೌಡರ ಸಮರ್ಥನೆ. ಆದರೆ, ಇವರ ನೂರಾರು ಆಡು-ಕುರಿಗಳು ಇಲ್ಲೇ ಮೇಯುತ್ತಿದ್ದವು. ಇದರಿಂದ ಪರಿಸರಕ್ಕೆ ಯಾವುದೇ ಹಾನಿ ಇಲ್ಲವೇ ಎಂಬುದು ಊರಿನವರ ಪ್ರಶ್ನೆ.

2. ತಮ್ಮ ಕುರಿಗಳ ಅನುಕೂಲಕ್ಕಾಗಿ ಹೊಂಡದ ರೀತಿ ನೀರು ನಿಲ್ಲಿಸಲು ಜಾಗ ಮಾಡಿ ಕೊಂಡಿದ್ದರು. ಪ್ರಸಿದ್ಧಿಗೆ ಬಂದ ನಂತರ 4-6 ಚಿಕ್ಕ ಗುಂಡಿಗಳನ್ನು ಯಂತ್ರದ ಮೂಲಕ ತೋಡಿಸಿದ್ದಾರೆ. ಇವು ಬಂಡೆಗಳು ಜಾರುವಂತೆ ಮಾಡುತ್ತವೆ ಹೊರತು ಯಾರಿಗೂ ಪ್ರಯೋಜನವಾಗಿಲ್ಲ. ಕಾಮೇಗೌಡ ಹೇಳುವಂತೆ 16 ಕೆರೆಗಳು ಇಲ್ಲ. ಕೆರೆಗಳನ್ನು ಸ್ವತಃ ಏಕಾಂಗಿಯಾಗಿ ನಿರ್ವಿುಸಿದ್ದಾಗಿ ಕಾಮೇಗೌಡರು ಹೇಳಿಕೊಂಡಿದ್ದರೂ, ತೀರಾ ಇತ್ತೀಚೆಗೆ ಯಂತ್ರದ ಮೂಲಕ ಕೆಲಸ ಮಾಡಿಸಿರುವುದು ಇಂದಿಗೂ ಸ್ಪಷ್ಟವಾಗಿ ಕಾಣಿಸುತ್ತದೆ. ಅಲ್ಲದೆ, ಆ ಕಲ್ಲುಗಳನ್ನು ನೋಡಿದರೆ ವ್ಯಕ್ತಿಯೊಬ್ಬ ಅವುಗಳನ್ನು ಎತ್ತಿಡಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಒಂದು ಹಳೇ ಹೊಂಡ ಬಿಟ್ಟರೆ ಅಲ್ಲಿ ಕೆರೆ ಎನಿಸಿಕೊಳ್ಳಬಹುದಾದ ಪ್ರದೇಶ ಇಲ್ಲ. ಊರೊಟ್ಟಿನ ಹಳೆಯ ಕೆರೆಗಳನ್ನು ಗ್ರಾಮದಲ್ಲಿ ಕಾಣಬಹುದು.

3. ಕಾಮೇಗೌಡರು ಹೇಳುವಂತೆ ಅಲ್ಲಿ ಹತ್ತಾರು ವರ್ಷಗಳಿಂದ ಬೆಳೆದಿರುವ ಮರಗಳು ಇಲ್ಲ. ಸೋಮಶೇಖರ್ ಅರಣ್ಯ ಸಚಿವರಾಗಿದ್ದಾಗ ಅಲ್ಲಿ 1500 ಸಸಿಗಳನ್ನು ನೆಡಿಸಿದ್ದರು. ಇತ್ತೀಚೆಗೆ ಆ ಗಿಡಗಳನ್ನೂ ನಾಶ ಮಾಡಿದ್ದಾರೆ ಎಂಬುದು ಗ್ರಾಮಸ್ಥರ ಆರೋಪ. ಪ್ರಸಿದ್ಧಿಗೆ ಬಂದ ನಂತರ ಇತ್ತೀಚೆಗೆ ಕೆಲ ಗಿಡಗಳನ್ನು ವಿದ್ಯುತ್ ತಂತಿ ಕೆಳಗೆ ನೆಟ್ಟಿದ್ದರಿಂದ, ಅದು ಯಾವತ್ತಿದ್ದರೂ ಅಪಾಯವೇ ಎನ್ನುತ್ತಾರೆ ಇಲಾಖೆಯ ಅಧಿಕಾರಿಗಳು. ಗ್ರಾಮದ ಹಿರಿಯ ವೆಂಕಟೇಗೌಡರ ತಂದೆ, ಇತ್ತೀಚೆಗೆ ನಿಧನರಾದ ಶತಾಯುಷಿ ವೆಂಕಟದಾಸೇಗೌಡ ನೆಡಿಸಿರುವ ಮರಗಳು ಅಲ್ಲಿವೆ. ಅವುಗಳಿಗೂ ಕಾಮೇಗೌಡರಿಗೂ ಸಂಬಂಧ ಇಲ್ಲ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಆ ಮರಗಳನ್ನು ಕಾಮೇಗೌಡ ಸ್ವಂತ ಸಾಧನೆಗೆ ಸೇರಿಸಿಕೊಂಡಿದ್ದಾರೆ ಎಂಬುದು ಗ್ರಾಮಸ್ಥರ ಆರೋಪ.

4. ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳನ್ನು ಹೆದರಿಸಿಕೊಂಡು ಈಗ ತಮ್ಮ ಅನುಕೂಲಕ್ಕೆ ತಕ್ಕಂತೆ ಕಾಮೇಗೌಡ ಬೆಟ್ಟವನ್ನು ಬಳಸಿಕೊಳ್ಳುತ್ತಿದ್ದಾರೆ. ದೇವಸ್ಥಾನಕ್ಕೆ ಹೋಗುವುದಕ್ಕೂ ತೊಂದರೆ ಕೊಡುತ್ತಾರೆ. ಗ್ರಾಮದಲ್ಲಿ ಜನಿಸಿದ ಶ್ರೀಗಳೊಬ್ಬರು ಅಲ್ಲಿ ದೇವಸ್ಥಾನ ಕಟ್ಟಿಸಲು ಯತ್ನಿಸಿದರೆ ಅದಕ್ಕೂ ಕಾಮೇಗೌಡರು ತೊಂದರೆ ಕೊಡುತ್ತಿದ್ದಾರೆ ಎಂಬುದು ಗ್ರಾಮಸ್ಥರ ದೂರು.

5. ಪ್ರಧಾನಿ ಬಾಯಲ್ಲಿ ಕಾಮೇಗೌಡರ ಹೆಸರು ಬಂದ ಬಳಿಕ ಸಣ್ಣಪುಟ್ಟ ವಿಚಾರಕ್ಕೂ ಅಧಿಕಾರಿಗಳಿಗೆ ಕರೆ ಮಾಡುತ್ತಾರೆ. ಮಾತು ಕೇಳದಿದ್ದರೆ ಮುಖ್ಯಮಂತ್ರಿಗೆ ಹೇಳುವ ಬೆದರಿಕೆ ಹಾಕುತ್ತಾರೆ. ತಮ್ಮನ್ನು ಕಂಡರೆ ಆಗದವರ ವಿರುದ್ಧ ದೂರು ನೀಡುವುದು ಸಾಮಾನ್ಯವಾಗಿದೆ ಎಂದು ಜನ ಹೇಳುತ್ತಾರೆ.

6. ಕಾಮೇಗೌಡರಿಗೆ ಗ್ರಾಮದಲ್ಲಿ 3 ಮನೆಗಳಿದ್ದರೂ ಅವು ಮಕ್ಕಳಿಗೆ ಸೇರಿದ್ದು, ತನಗೆ ಮನೆ ಇಲ್ಲ ಎನ್ನುತ್ತಾರೆ. ಮನೆ ಕಟ್ಟಿಸಿಕೊಡಬೇಕೆಂದು ಮುಖ್ಯಮಂತ್ರಿಗೆ ಬೇಡಿಕೆ ಇಟ್ಟಿದ್ದಾರೆ. ಇದು ಎಷ್ಟರಮಟ್ಟಿಗೆ ಸರಿ? ಎಂಬುದು ಅವರ ಮೇಲಿನ ಆರೋಪ. ಮೂರು ಮನೆಗಳು ಇರುವುದನ್ನು ಕಾಮೇಗೌಡರು ಒಪ್ಪಿಕೊಳ್ಳುತ್ತಾರೆ.

7. ಮಳೆ ಬಂದಾಗ ಬೆಟ್ಟದಿಂದ ನೀರಿನೊಂದಿಗೆ ಬರುವ ಮರಳನ್ನು ಸಂಗ್ರಹಿಸುವ ದುರುದ್ದೇಶದಿಂದಲೇ ಕಾಮೇಗೌಡರು ಹೊಂಡಗಳನ್ನು ತೋಡಿಸಿದ್ದಾರೆ. ಈ ಹಿಂದೆ ಇಲ್ಲಿಂದ ಮರಳು ತೆಗೆದಿರುವ ಉದಾಹರಣೆಗಳೂ ಇವೆ ಎನ್ನುತ್ತಾರೆ ಅಲ್ಲಿನ ನಿವಾಸಿಗಳು.

ಶಾಂತಿ ಸಭೆ ನಡೆಸದ ತಹಸೀಲ್ದಾರ್

ಕೆರೆ ಕಾಮೇಗೌಡ ಮತ್ತು ಗ್ರಾಮಸ್ಥರ ನಡುವಿನ ಆರೋಪ-ಪ್ರತ್ಯಾರೋಪ ಕುರಿತು ಬುಧವಾರ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದಲ್ಲಿ ನಡೆಯಬೇಕಿದ್ದ ಶಾಂತಿ ಸಭೆ ತಹಸೀಲ್ದಾರ್ ಗೈರು ಹಾಜರಿಯಿಂದ ರದ್ದಾಯಿತು. ಮಂಗಳವಾರ ಕಾಮೇಗೌಡರ ಆರೋಗ್ಯ ವಿಚಾರಿಸಲು ಗ್ರಾಮಕ್ಕೆ ಭೇಟಿ ನೀಡಿದ್ದ ಉಪ ವಿಭಾಗಾಧಿಕಾರಿ ಸೂರಜ್ ಮುಂದೆ ಕಾಮೇಗೌಡ ಹಾಗೂ ಗ್ರಾಮಸ್ಥರು ಪರಸ್ಪರ ದೂರು ಹೇಳಿಕೊಂಡಿದ್ದರು. ಆಗ ಉಪ ವಿಭಾಗಾಧಿಕಾರಿ, ಬುಧವಾರ ಬೆಳಗ್ಗೆ 10.30ಕ್ಕೆ ತಾಪಂ ಇಒ ಹಾಗೂ ಪೊಲೀಸರ ಸಮ್ಮುಖ ಶಾಂತಿ ಸಭೆ ನಡೆಸಿ, ವರದಿ ನೀಡಬೇಕೆಂದು ತಹಸೀಲ್ದಾರ್ ಚಂದ್ರಮೌಳಿಗೆ ಸೂಚಿಸಿದ್ದರು. ಶಾಂತಿ ಸಭೆಗೆ ಬಾರದಿದ್ದಾಗ ತಹಸೀಲ್ದಾರ್ ಮೊಬೈಲಿಗೆ ಕರೆ ಮಾಡಿದಾಗ, ‘ನೀವೇ 8ರಿಂದ 10 ಜನ ಕಚೇರಿಗೆ ಬನ್ನಿ’ ಎಂದಿದ್ದಾರೆ. ಅದಕ್ಕೆ ಒಪ್ಪದ ಜನರು ಗ್ರಾಮಕ್ಕೆ ಬಂದು ಅಹವಾಲು ಕೇಳುವಂತೆ ಪಟ್ಟು ಹಿಡಿದಿದ್ದಾರೆ. ಅದಕ್ಕೆ ತಹಸೀಲ್ದಾರ್ ಉಡಾಫೆಯಿಂದ ಉತ್ತರಿಸಿದರೆಂದು ಗ್ರಾಮಸ್ಥರು ‘ವಿಜಯವಾಣಿ’ ಜತೆ ಮಾತನಾಡುತ್ತ ಆರೋಪಿಸಿದರು.

ಕಚೇರಿಗೆ ಬರುವಂತೆ ಗ್ರಾಪಂ ವತಿಯಿಂದ ಗ್ರಾಮಸ್ಥರಿಗೆ ನೋಟಿಸ್ ನೀಡಲಾಗಿತ್ತು. ಅವರು ಬರಲಿಲ್ಲ. ಬೇರೆ ದಿನ ಶಾಂತಿ ಸಭೆ ನಡೆಸಲಾಗುವುದು. | ಚಂದ್ರಮೌಳಿ ತಹಸೀಲ್ದಾರ್