ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಅಪಾಯಕಾರಿ ಮರಗಳ ಕೊಂಬೆ ತೆರವಿಗೆ ಇಲಾಖೆಯಲ್ಲಿ ಅನುದಾನ ಲಭ್ಯವಿಲ್ಲ. ಮರಗಳನ್ನು ತೆರವುಗೊಳಿಸಬೇಕಿದ್ದರೆ ಅದಕ್ಕೆ ಇಲಾಖೆಯ ಉನ್ನತಮಟ್ಟದ ಅಧಿಕಾರಿಗಳಿಂದ ಅನುಮತಿ ಪಡೆಯಬೇಕಿದೆ. ಇದು ದೀರ್ಘ ಪ್ರಕ್ರಿಯೆಯಾಗಿದೆ ಎಂದು ಅರಣ್ಯಾಧಿಕಾರಿ ಅಸಹಾಯಕತೆ ವ್ಯಕ್ತಪಡಿಸಿದರು.
ಕಾಪು ಪುರಸಭೆಯ ಇಂದಿರಗಾಂಧಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು. ಮಳೆಗಾಲ ಸಮೀಪಿಸುತ್ತಿದ್ದು, ಪುರಸಭೆ ವ್ಯಾಪ್ತಿಯ ಹಲವೆಡೆ ಅಪಾಯಕಾರಿ ಮರಗಳು ಹಾಗೂ ಕೊಂಬೆಗಳ ತೆರವಿಗೆ ಅರಣ್ಯ ಇಲಾಖೆ ಕ್ರಮ ತೆಗೆದುಕೊಳ್ಳಬೇಕು ಎಂದು ಸದಸ್ಯ ಅರುಣ್ ಶೆಟ್ಟಿ ಪಾದೂರು ಹಾಗೂ ಮುಖ್ಯಾಧಿಕಾರಿ ನಾಗರಾಜ್ ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಅರಣ್ಯಾಧಿಕಾರಿ ಅನುದಾನ ಇಲ್ಲವೆಂದು ಸಭೆಗೆ ತಿಳಿಸಿದರು.
ಮೂಳೂರಿನಲ್ಲಿ ಎಸ್‌ಟಿಪಿ ರಚನೆಗೆ ವಿರೋಧ: ನಮ್ಮ ಗಮನಕ್ಕೆ ತಾರದೆ ಮೂಳೂರಿನಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕ (ಎಸ್‌ಟಿಪಿ) ರಚನೆಗಾಗಿ ಜಾಗ ಗೊತ್ತುಪಡಿಸಲಾಗಿದೆ. ಪ್ರಾಕೃತಿಕ ಸೌಂದರ್ಯ, ಐತಿಹಾಸಿಕ ಪರಂಪರೆ ಮತ್ತು ಜನವಸತಿಗೆ ಯೋಗ್ಯವಾಗಿರುವ ಪ್ರದೇಶದಲ್ಲಿ ಎಸ್‌ಟಿಪಿ ರಚನೆಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಕೌನ್ಸಿಲರ್‌ಗಳಾದ ಮಹಮ್ಮದ್ ಆಸಿಫ್ ಮತ್ತು ಸತೀಶ್ಚಂದ್ರ ಮೂಳೂರು ಸ್ಪಷ್ಟಪಡಿಸಿದರು.
ಮುಖ್ಯಾಧಿಕಾರಿ ಸ್ಪಷ್ಟನೆ ನೀಡಿ, ಈ ಬಗ್ಗೆ ಕಳೆದ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪುರಸಭೆ ವ್ಯಾಪ್ತಿಯ ನಾಲ್ಕೂ ಗ್ರಾಮಗಳಲ್ಲಿ ಕೂಲಂಕಷವಾಗಿ ಪರಿಶೀಲಿಸಿದ ಬಳಿಕ ಮೂಳೂರಿನ ಜಾಗ ಗೊತ್ತುಪಡಿಸಲಾಗಿದೆ. ಪುರಸಭೆಗೆ ಸೂಕ್ತ ಎಸ್‌ಟಿಪಿ ರಚನೆಯಾಗದೆ ಇರುವುದರಿಂದ ಹಸಿರು ಪೀಠದಿಂದ ದಂಡನೆಗೊಳಗಾಗುವ ಭೀತಿಯಿದೆ. ಅಲ್ಲಿನ ಜಾಗ ಸೂಕ್ತ ಎಂದು ಮನವರಿಕೆಯಾದ ಬಳಿಕ ಜಮೀನು ಹಸ್ತಾಂತರ ಪ್ರಕ್ರಿಯೆ ನಡೆಸಲಾಗಿದೆ. ವೈಜ್ಞಾನಿಕ ರೀತಿಯಲ್ಲಿ, ಪರಿಸರಕ್ಕೆ ತೊಂದರೆಯಾಗದಂತೆ ಎಸ್‌ಟಿಪಿ ರಚನೆಗೆ ಕ್ರಮ ತೆಗೆದುಕೊಳ್ಳಲಾಗುವುದು. ಪುರಸಭೆಯ ಹಿತದೃಷ್ಟಿಯಿಂದ ಸದಸ್ಯರೆಲ್ಲರೂ ನಮ್ಮೊಂದಿಗೆ ಕೈಜೋಡಿಸಬೇಕಿದೆ ಎಂದು ಮನವಿ ಮಾಡಿದರು. ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ, ಉಪಾಧ್ಯಕ್ಷೆ ಸರಿತಾ ಶಿವಾನಂದ್, ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್ ಉಪಸ್ಥಿತರಿದ್ದರು.
ಕಾಪು ಪೇಟೆಯಲ್ಲಿ ಬೀದಿ ಬದಿ ವ್ಯಾಪಾರಿಯಾಗಿ, ಹಣ್ಣು ಹಂಪಲು ಮಾರಾಟ ವ್ಯಾಪಾರಕ್ಕೆ ಪರವಾನಗಿ ಪಡೆದುಕೊಂಡಿರುವ ವ್ಯಾಪಾರಿಯೊಬ್ಬರು ಈಗ ಮಾರುಕಟ್ಟೆ ಬಳಿ ನಂದಿನಿ ಮಿಲ್ಕ್ ಸಹಿತ ಇನ್ನಿತರ ರೀತಿಯ ವ್ಯಾಪಾರ ನಡೆಸುತ್ತಿದ್ದಾರೆ. ಇದು ನಿಯಮಾವಳಿಗೆ ವಿರುದ್ಧವಲ್ಲವೇ?. ಅದೇ ವ್ಯಾಪಾರಿ ಮಾರಿಪೂಜೆ ಸಂದರ್ಭ ಅಂಗಡಿ ಏಲಂ ವಿಚಾರದಲ್ಲಿ ಪುರಸಭಾ ಸದಸ್ಯರು, ಸಿಬ್ಬಂದಿಯನ್ನು ಹೀಯಾಳಿಸಿದ್ದಾರೆ. ಅಂತಹವರ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳಬೇಕಿದೆ. ಪುರಸಭೆ ಕ್ರಮ ಜರುಗಿಸಲು ಮುಂದಾಗದಿದ್ದಲ್ಲಿ ಅವರ ವಿರುದ್ಧ ವೈಯಕ್ತಿಕವಾಗಿ ಕೋರ್ಟ್‌ಗೆ ಹೋಗಿ ಕಾನೂನು ಕ್ರಮಕ್ಕೆ ಆಗ್ರಹಿಸುವುದಾಗಿ ಸದಸ್ಯ ಕಿರಣ್ ಆಳ್ವ ತಿಳಿಸಿದರು.
ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಬ್ರಹ್ಮಕಲಶೋತ್ಸವ ಸಂದರ್ಭ ಅಂಗಡಿ ಏಲಂ ಪ್ರಕ್ರಿಯೆಯಲ್ಲಿ ಹಲವು ರೀತಿಯ ಗೊಂದಲವುಂಟಾಗಿದ್ದು, ಏಲಂನಲ್ಲಿ ಪಾಲ್ಗೊಂಡಿದ್ದ ಬಿಡ್‌ದಾರರು ವಕೀಲರ ಮೂಲಕ ಪುರಸಭೆ ಮುಖ್ಯಾಧಿಕಾರಿ ಸಹಿತ ಸದಸ್ಯರೆಲ್ಲರಿಗೂ ನೋಟಿಸ್ ನೀಡಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ನೋಟಿಸ್ ನೀಡಿದವರ ವಿರುದ್ಧ ಹಕ್ಕುಚ್ಯುತಿ ಮಂಡಿಸುವಂತೆ ಸದಸ್ಯರು ಒತ್ತಾಯಿಸಿದರು.