ಜಿಲ್ಲೆ

ಎಲ್ಲ ಕೊಲೆಗಳಲ್ಲೂ ಅದೊಂದು ಸಾಮ್ಯತೆ: ಶೋಭಾ ಕರಂದ್ಲಾಜೆ

ಉಡುಪಿ: ರಾಜ್ಯದಲ್ಲಿ ಕೆಲವು ದಿನಗಳಲ್ಲಿ ಮೇಲಿಂದ ಮೇಲೆ ನಡೆದ ಹತ್ಯೆಗಳ ಹಿನ್ನೆಲೆಯಲ್ಲಿ ಇಂದು ಉಡುಪಿಯಲ್ಲಿ ಮಾತನಾಡಿರುವ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದ್ದು, ಎಲ್ಲ ಕೊಲೆಗಳಲ್ಲೂ ಒಂದು ಸಾಮ್ಯತೆ ಇರುವುದರ ಕುರಿತು ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ನಡೆಯುತ್ತಿರುವ ಈ ಕೊಲೆಗಳಿಗೆ ಸಂಬಂಧಿಸಿದಂತೆ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿದ್ದರ ಬಗ್ಗೆಯೂ ಹೇಳಿಕೊಂಡಿರುವ ಅವರು, ಈ ಕೊಲೆಗಳಿಗೆ ತರಬೇತಿ ಎಲ್ಲಿ ಸಿಗುತ್ತಿದೆ, ಇವುಗಳಿಗೆ ಹಣಕಾಸಿನ ನೆರವು ನೀಡುತ್ತಿರುವವರು ಯಾರು, ಕರ್ನಾಟಕದಲ್ಲಿ ಅವರಿಗೆ ಸ್ಥಳೀಯವಾಗಿ ಬೆಂಬಲಿಸುತ್ತಿರುವವರು ಯಾರು ಎಂಬ ವಿಚಾರಗಳ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಕೋರಿದ್ದಾಗಿ ತಿಳಿಸಿದರು. ಅಲ್ಲದೆ ರಾಜ್ಯದಲ್ಲಿ ಪೊಲೀಸರ ಸಂಖ್ಯೆಯನ್ನು ಹೆಚ್ಚಿಸಬೇಕು ಎಂಬುದೂ ಸೇರಿದಂತೆ ಹಲವಾರು ಬೇಡಿಕೆಗಳನ್ನು ಷಾ ಅವರ ಮುಂದಿಟ್ಟಿದ್ದು, ಅವರು ಪೂರಕವಾಗಿ ಸ್ಪಂದಿಸಿದ್ದಾರೆ ಎಂಬುದನ್ನು ತಿಳಿಸಿದ್ದಾರೆ.

ನಿರಂತರವಾಗಿ ಹಿಂದು ಯುವಕರನ್ನು ಮತಾಂಧರು ಕಗ್ಗೊಲೆಗೈಯುತ್ತಿದ್ದಾರೆ. ಈ ಎಲ್ಲ ಕೊಲೆಗಳಲ್ಲೂ ಒಂದು ಸಾಮ್ಯತೆ ಇದೆ, ಎಲ್ಲರನ್ನೂ ಕತ್ತು ಕತ್ತರಿಸಿ ಕೊಲೆ ಮಾಡಲಾಗಿದೆ, ಕರ್ನಾಟಕದಲ್ಲಿ ಕೇರಳ ಮಾದರಿಯ ಹತ್ಯೆ ನಡೆಯುತ್ತಿದೆ ಎಂಬುದಾಗಿ ಸಂಸದೆ ಶೋಭಾ ಅಭಿಪ್ರಾಯಪಟ್ಟಿದ್ದಾರೆ.