ಪಬ್‌ಜಿ ಸೇರಿ ಆನ್‌ಲೈನ್ ಗೇಮ್ ಚಟಕ್ಕೆ ಬಿದ್ದಿರುವ ಯುವಕರು ಇವುಗಳ ಪ್ರಚೋದನೆಯಿಂದ ಆತ್ಮಹತ್ಯೆಗೆ ಶರಣಾಗಿರುವ ಹಲವು ಉದಾಹರಣೆಗಳಿವೆ. ವಿಡಿಯೋ ಗೇಮ್ ಮತ್ತು ಮೊಬೈಲ್ ಹೆಚ್ಚು ಬಳಸುವ ಹದಿಹರೆಯದ ವಯಸ್ಸಿನ ಅಂದರೆ 9,10ನೇ ತರಗತಿ ಹಾಗೂ ಪಿಯುಸಿ ವಿದ್ಯಾರ್ಥಿಗಳು ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಇವರು ಸದಾ ಒಬ್ಬರೇ ಇರಲು ಬಯಸುತ್ತಾರೆ. ಹಾಗಾಗಿ ಒಂದು ರೂಮ್ ಸೇರಿಕೊಂಡು ಸದಾ ಮೊಬೈಲ್ ಬಳಕೆ ಮಾಡುತ್ತಿರುತ್ತಾರೆ. ರೂಮ್ ಬಾಗಿಲು ಬಡಿದರೆ ಗಲಾಟೆ ಮಾಡುತ್ತಾರೆ. ಒಂದು ವೇಳೆ ಇವರಿಂದ ಮೊಬೈಲ್ ಕಸಿದುಕೊಂಡರೆ ಪ್ರಾಣ ಕಳೆದುಕೊಳ್ಳುವುದಕ್ಕೂ ಹಿಂದು ಮುಂದು ನೋಡುವುದಿಲ್ಲ. ಇದನ್ನು ‘ಸ್ಕ್ರೀನ್ ಟೈಮ್ ಅಡಿಕ್ಷನ್’ ಎನ್ನಲಾಗುತ್ತದೆ. ಇಂತಹವರಿಗೆ ಪಾಲಕರು ತಾಳ್ಮೆಯಿಂದ ಅದರ ದುಷ್ಪರಿಣಾಮದ ಬಗ್ಗೆ ಮನವರಿಕೆ ಮಾಡಿಕೊಡಬೇಕಾಗುತ್ತದೆ. ಅದು ಸಾಧ್ಯವಾಗದೇ ಇದ್ದಾಗ ಆಪ್ತ ಸಮಾಲೋಚಕರನ್ನು ಭೇಟಿ ಮಾಡಿಸಿ ಕೌನ್ಸಿಲಿಂಗ್ ಕೊಡಿಸುವ ಅಗತ್ಯವಿದೆ. ಇದಕ್ಕಾಗಿ ನಿಮಾನ್ಸ್‌ನಲ್ಲಿ ಷಟ್ ಕ್ಲಿನಿಕ್ ತೆರೆಯಲಾಗಿದ್ದು ಇದರ ಉಪಯೋಗ ಪಡೆಯಬಹುದಾಗಿದೆ.