ಕಿನ್ನಿಗೋಳಿ: ಮನೆಗೆ ನುಗ್ಗಿ ನಗ ನಗದು ಕಳವುಗೈದ ಘಟನೆ ಮೂಲ್ಕಿ ಠಾಣಾ ವ್ಯಾಪ್ತಿಯ ಬಳ್ಕುಂಜೆ ನೀರಳಿಕೆಯಲ್ಲಿ ಗುರುವಾರ ಮುಂಜಾನೆ ವೇಳೆ ನಡೆದಿದೆ. ನಗ ನಗದು ಕಳಕೊಂಡವರನ್ನು ಬಳ್ಕುಂಜೆ ನೀರಳಿಕೆ ನಿವಾಸಿ ಶೇಖಬ್ಬ ಎಂದು ಗುರುತಿಸಲಾಗಿದೆ.
ಶೇಖಬ್ಬ ಪತ್ನಿ ಮತ್ತು ಮಕ್ಕಳು ರಾತ್ರಿ ಮಲಗಿದ್ದು, ಶೇಖಬ್ಬ ಅವರ ಮಗಳ ಗಂಡ ರಾತ್ರಿ 1.00 ಗಂಟೆಗೆ ಕರೆ ಮಾಡಿದ್ದು ಕರೆ ಸ್ವೀಕರಿಸಿ ಮಲಗಿದ್ದರು. ಆದರೆ ಆ ಸಂದರ್ಭ ಕಳತನ ನಡೆದಿಲ್ಲ, ಮುಂಜಾನೆ 4.30ಕ್ಕೆ ಶೇಖಬ್ಬ ಅವರ ಮಗಳು ಶೌಚಾಲಯಕ್ಕೆ ತೆರಳಲು ಏಳುವಾಗ ಕಳ್ಳತನ ನಡೆದ ಬಗ್ಗೆ ಬೆಳಕಿಗೆ ಬಂದಿದೆ.
ಮನೆ ಮಂದಿ ಮನೆಯ ಚಾವಡಿಯಲ್ಲಿ ಮಲಗಿದ್ದು, ಮನೆಯ ಮುಂಭಾಗದ ಚಿಲಕ ಹಾಕಿ ಹಿಂಬಾಗಿಲಿನ ಬಾಗಿಲ ಒಳಭಾಗದ ಚಿಲಕವನ್ನು ರಾಡ್‌ನಿಂದ ಒಡೆದು ಕಳ್ಳರು ಒಳನುಗ್ಗಿದ್ದಾರೆ. ಮನೆಯಲ್ಲಿ ಜಾಲಾಡಿ, ಹಾಸಿಗೆಯ ಅಡಿಯಲ್ಲಿ ಇರಿಸಿದ್ದ ಕಪಾಟಿನ ಕೀಲಿಕೈ ಬಳಸಿ ಕಪಾಟಿನ ಬೀಗ ತೆಗೆದು ಕಪಾಟನ್ನು ಜಾಲಾಡಿ ಸುಮಾರು 2 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ಸುಮಾರು 5,000 ರೂ. ನಗದು ದೋಚಿದ್ದಾರೆ.
ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನ ದಳ, ಮೂಲ್ಕಿ ಪೊಲೀಸ್ ಇನ್‌ಸ್ಪೆಕ್ಟರ್ ವಿದ್ಯಾಧರ್, ಜಾಗತಿಕ ಬಂಟರ ಸಂಘದ ಒಕ್ಕೂಟದ ಕರ್ನಿರೆ ವಿಶ್ವನಾಥ ಶೆಟ್ಟಿ, ಕಾಂಗ್ರೆಸ್ ನಾಯಕ ಸಾಹುಲ್ ಹಮೀದ್ ಭೇಟಿ ನೀಡಿದ್ದಾರೆ. ಈ ನಡುವೆ ಕಳ್ಳರು ಇದೇ ಪರಿಸರದ ವಿಜಿತ್ ಶೆಟ್ಟಿ ಎಂಬವರ ಮನೆಯ ಕಿಟಿಕಿ ಬದಿಯಲ್ಲಿಟ್ಟಿದ್ದ ಮಹಿಳೆಯ ವ್ಯಾನಿಟ್ ಬ್ಯಾಗ್ ಹೊತ್ತೊಯ್ದು, ಅದರಲ್ಲಿ ಸ್ವಲ್ಪ ಹಣವನ್ನು ಕಳವು ಮಾಡಿದ್ದಾರೆ.