ಕಾಸರಗೋಡು: ಉಪ್ಪಳದ ಜೋಡುಕಲ್ಲಿನಲ್ಲಿ ಕೇಶವ ಶಿಶುಮಂದಿರದ ಸೇವಾನಿಧಿ ಕಾಣಿಕೆ ಹುಂಡಿ ಹಾಡಹಗಲು ಕಳವುಗೈದು, ಹುಂಡಿಯ ಬೀಗ ಒಡೆಯಲು ವಿಫಲ ಯತ್ನ ನಡೆಸಲಾಗಿದೆ. ಶಿಶುಮಂದಿರದ ಸನಿಹದ ಮನೆಯೊಂದರ ವರಾಂಡದಲ್ಲಿ ಎಸೆದ ಸ್ಥಿತಿಯಲ್ಲಿ ಕಾಣಿಕೆಹುಂಡಿ ಪತ್ತೆಯಾಗಿದೆ. ಸೋಮವಾರ ಮಧ್ಯಾಹ್ನ 2ರಿಂದ ಸಂಜೆ 5ರ ಕಾಲಾವಧಿಯೊಳಗೆ ಹುಂಡಿ ಕಳವು ನಡೆದಿದೆ. ಈ ಬಗ್ಗೆ ಸನಿಹದ ಮನೆಯವರು ಶಿಶುಮಂದಿರ ಸಮಿತಿ ಪದಾಧಿಕಾರಿಗಳಿಗೆ ನೀಡಿದ ಮಾಹಿತಿಯನ್ವಯ ಸ್ಥಳಕ್ಕಾಗಮಿಸಿ ನೋಡಿದಾಗ ಶಿಶುಮಂದಿರದ ಎದುರಿನ ಬಾಗಿಲ ಬೀಗ ಒಡೆದ ಸ್ಥಿತಿಯಲ್ಲಿ ಕಂಡು ಬಂದಿತ್ತು. ಶಿಶು ಮಂದಿರ ಸಮಿತಿ ಕಾರ್ಯದರ್ಶಿ ಲೋಕೇಶ್ ನೋಂಡ ನೀಡಿದ ದೂರಿನನ್ವಯ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.