ಜಿಲ್ಲೆ

ಕಲೆಯ ಆರಾಧನೆ ಶ್ಲಾಘನೀಯ

ಇಂದಿರಾ ಎನ್ ಕೆ

ಕೋಟ: ಕಲೆಯನ್ನು ಆರಾಧಿಸಿ ಅದನ್ನು ವೇದಿಕೆಯಾಗಿರಿಸಿಕೊಂಡ ಸಾಮಾಜಿಕ ಕೈಂಕರ್ಯ ನಿಜಕ್ಕೂ ಶ್ಲಾಘನೀಯ ಎಂದು ಯೋಗಗುರುಕುಲ ಮುಖ್ಯಸ್ಥ ಡಾ.ವಿದ್ವಾನ್ ವಿಜಯ ಮಂಜರ್ ಹೇಳಿದರು.

ಯಡಬೆಟ್ಟು ಹಗ್ರಿ ಪರಿಸರದಲ್ಲಿ ಯಡಬೆಟ್ಟು ಯಕ್ಷಮಿತ್ರರು ಸಾಸ್ತಾನ ಆಶ್ರಯದಲ್ಲಿ ಸೋಮವಾರ ಯಕ್ಷರಾತ್ರಿ ಅದ್ದೂರಿಯ ಯಕ್ಷ ವೇದಿಕೆಯಲ್ಲಿ ಸಾಧಕ ಈಶ್ವರ್ ಮಲ್ಪೆ ಟೀಮ್ ಅವರಿಗೆ ಸನ್ಮಾನಗೈದು ಮಾತನಾಡಿ, ಸಮಾಜದ ಏಳು-ಬೀಳುಗಳಿಗೆ ಸ್ಪಂದಿಸುವ ವ್ಯಕ್ತಿಗಳನ್ನು ಗುರುತಿಸಬೇಕಾದ ಅಗತ್ಯವನ್ನು ಸಭೆಯಲ್ಲಿ ಒತ್ತಿ ಹೇಳಿದರು. ಈಶ್ವರ್ ಮಲ್ಪೆಯಂತಹವರು ಗ್ರಾಮ-ಗ್ರಾಮಗಳಲ್ಲಿ ಹುಟ್ಟಿಕೊಳ್ಳಬೇಕು. ತನ್ಮೂಲಕ ಗ್ರಾಮಗಳಲ್ಲಿ ಸಾಮಾಜಿಕ ಪ್ರಜ್ಞೆ ನೆಲೆಯೂರಲಿದೆ ಎಂದರು.

ಈ ಸಂದರ್ಭ ರಾಜ್ಯಮಟ್ಟದ ಹ್ಯಾಮರ್ ಸಾಧಕ ತನುಷ್ ಪೂಜಾರಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪಾಂಡೇಶ್ವರ ರಕ್ತೇಶ್ವರಿ ದೇಗುಲ ಧರ್ಮದರ್ಶಿ ಕೆ.ವಿ.ರಮೇಶ್ ರಾವ್, ಸಾಸ್ತಾನದ ಬ್ರಹ್ಮಬೈದರ್ಕಳ ಗೋಳಿಗರಡಿ ಪಾತ್ರಿ ಶಂಕರ್ ಪೂಜಾರಿ, ಯಕ್ಷಮಿತ್ರರು ತಂಡದ ಗೌರವಾಧ್ಯಕ್ಷ ಕರಿಯ ದೇವಾಡಿಗ, ಅಧ್ಯಕ್ಷ ಗೋಪಾಲ ಮೆಂಡನ್ ಉಪಸ್ಥಿತರಿದ್ದರು. ನಿರೂಪಕ ಅಭಿಜಿತ್ ಪಾಂಡೇಶ್ವರ ನಿರೂಪಿಸಿದರು. ಸುಂಕದಕಟ್ಟೆ ಮೇಳದ ಕಲಾವಿದರಿಂದ ಶ್ರೀದೇವಿ ಮಹಾತ್ಮೆ ಪ್ರಸಂಗ ಪ್ರದರ್ಶನಗೊಂಡಿತು. ವಿಶೇಷವಾಗಿ ಮೆರವಣಿಗೆ, ಗಣಪತಿ ಪೂಜಾ ಕಾರ್ಯಕ್ರಮ ನೆರವೇರಿತು.