ಜಿಲ್ಲೆ

ಬೆಂಗಳೂರಿನಲ್ಲಿ ಬಾಹ್ಯಾಕಾಶ ವಾಣಿಜ್ಯ ಸಮ್ಮೇಳನ; ಅಮೆರಿಕಾ ರಾಯಭಾರಿ ಗಾರ್ಸೆಟ್ಟಿ ಭಾಗಿ

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಅಮೆರಿಕ-ಭಾರತ ವಾಣಿಜ್ಯ ಬಾಹ್ಯಾಕಾಶ ಸಹಕಾರ ಸಮ್ಮೇಳನದಲ್ಲಿ ಭಾರತದಲ್ಲಿನ ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರು ಭಾಗಿಯಾಗಿ, ಬಾಹ್ಯಾಕಾಶ ವಲಯದ ನಾಯಕರು ಮತ್ತು ಉದ್ಯಮಿಗಳೊಂದಿಗೆ ಮುಂಬರುವ ದಿನಗಳಲ್ಲಿ ಅಮೆರಿಕ-ಭಾರತದ ಭಾಹ್ಯಾಕಾಶ ಸಂಬಂಧವನ್ನು ವಿವಿಧ ವಲಯಗಳಲ್ಲಿ ವಿಸ್ತರಿಸುವ ಕುರಿತು ಚರ್ಚೆ ನಡೆಸಿದರು.

ಕಾನ್ಸಲ್ ಜನರಲ್ ಕ್ರಿಸ್ ಹಾಡ್ಜಸ್ ಅವರೊಂದಿಗೆ ಇಸ್ರೋ ಅಧ್ಯಕ್ಷ ಡಾ. ಸೋಮನಾಥ್ ಅವರನ್ನು ಭೇಟಿ ಮಾಡಿದ ಅವರು, ನಾಸಾ ಮತ್ತು ಇಸ್ರೋ ಸಿಂಥೆಟಿಕ್ ಅರ್ಚರ್ ರಾಡಾರ್ ಮಿಷನ್ (ಎನ್‌ಐಎಸ್‌ಎಆರ್) ಸೇರಿದಂತೆ ಬಾಹ್ಯಾಕಾಶ ವಲಯದಲ್ಲಿನ ವಿವಿಧ ಸಹಯೋಗಗಳ ಕುರಿತು ಮಾತುಕತೆ ನಡೆಸಿದರು.

ಈ ವೇಳೆ ಅವರು ಉದ್ಯಮದ ಪ್ರಮುಖರು ಮತ್ತು ಅಮೇರಿಕನ್ ಚೇಂಬರ್ ಆಫ್ ಕಾಮರ್ಸ್ ಇಂಡಿಯಾದ ಸದಸ್ಯರೊಂದಿಗೆ, ವ್ಯೂಹಾತ್ಮಕ ಭದ್ರತೆ ಮತ್ತು ತಂತ್ರಜ್ಞಾನದ ಸಹಕಾರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಯುಎಸ್-ಇಂಡಿಯಾ ಇನಿಶಿಯೇಟಿವ್ ಆನ್ ಕ್ರಿಟಿಕಲ್ ಅಂಡ್ ಎರ್ಜಿಂಗ್ ಟೆಕ್ನಾಲಜೀಸ್ (ಐಸಿಇಟಿ) ಮಹತ್ವದ ಕುರಿತು ಚರ್ಚಿಸಿದರು. ನಂತರ ಅಮೆರಿಕ ಮತ್ತು ಭಾರತದ ಬಾಹ್ಯಾಕಾಶ ಸಹಕಾರವನ್ನು ವಿಸ್ತರಿಸಲು ಈ ಸಮ್ಮೇಳನ ಸಹಕಾರಿಯಾಗಿದೆ ಎಂದು ಗಾರ್ಸೆಟ್ಟಿ ಹೇಳಿದರು.

ಜಂಟಿ ಬಾಹ್ಯಾಕಾಶ ಅನ್ವೇಷಣೆ, ಉಪಗ್ರಹಗಳ ಉಡಾವಣೆ ಹಾಗೂ ಗಗನಯಾತ್ರಿಗಳಿಗೆ ತರಬೇತಿ ನೀಡುವುದರ ಕುರಿತು ಈ ಸಮ್ಮೇಳನವನ್ನು ಆಯೋಜಿಸಲಾಗಿತ್ತು.

ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಭೇಟಿ ನೀಡಿರುವ ಗಾರ್ಸೆಟ್ಟಿ ಅವರು ಬೆಂಗಳೂರು ಸೈನ್ಸ್ ಗ್ಯಾಲರಿಗೆ ಭೇಟಿ ನೀಡಿದರು. ನಂತರ ಅಂಧರ ಕ್ರಿಕೆಟ್ ತಂಡದ ಜೊತೆ ಸಂವಾದ ನಡೆಸಿದರು.