More

    ಪ್ರಜ್ವಲ್ ರೇವಣ್ಣ ಬಂಧನಕ್ಕೆ ಪ್ರಗತಿಪರ ಚಿಂತಕರ ಆಗ್ರಹ; ಹೋರಾಟದ ನಡಿಗೆ ಹಾಸನದ ಕಡೆಗೆ

    ಬೆಂಗಳೂರು: ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ರಾಜಕೀಯ ನಾಯಕರ ಪರಸ್ಪರ ಆರೋಪ ಪ್ರತ್ಯಾರೋಪದ ನಡುವೆಯೇ ಪ್ರಗತಿಪರ ಚಿಂತಕರು ಹೋರಾಟಕ್ಕೆ ಮುಂದಾಗಿದ್ದಾರೆ. ಶನಿವಾರ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಜಮಾಯಿಸಿದ ಸಾಹಿತಿಗಳು, ಕಲಾವಿದರು, ಪತ್ರಕರ್ತರು, ರಂಗಕರ್ಮಿಗಳನ್ನೊಳಗೊಂಡ ಪ್ರಗತಿಪರ ಚಿಂತಕರ ವೇದಿಕೆಯು ಮುಂದಿನ ಹೋರಾಟದ ರೂಪುರೇಷೆ ಕುರಿತು ಚರ್ಚೆ ನಡೆಸಿತು.

    ಮೇ 30ರಂದು ಹಾಸನದಲ್ಲಿ ಬೃಹತ್ ಮೆರವಣಿಗೆ ಮತ್ತು ಬಹಿರಂಗ ಸಭೆ ನಡೆಸಲು ತೀರ್ಮಾನಿಸಿದ ವೇದಿಕೆಯು ‘ಹೋರಾಟದ ನಡಿಗೆ ಹಾಸನದ ಕಡೆಗೆ’ ಎಂಬ ಶೀರ್ಷಿಕೆಯಡಿ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ. ಅಂದು ಬೆಳಗ್ಗೆ 10.30ಕ್ಕೆ ಹಾಸನದ ಮಹಾರಾಜ ಪಾರ್ಕ್‌ನಿಂದ ಮೆರವಣಿಗೆ ಆರಂಭವಾಗಲಿದ್ದು, ಹೊಸ ಬಸ್‌ನಿಲ್ದಾಣ ರಸ್ತೆಯಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಮೀಪ ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಿದೆ.

    ವಿಕೃತ ಲೈಂಗಿಕ ಹಗರಣದಲ್ಲಿ ಭಾಗಿಯಾಗಿರುವ ಪ್ರಜ್ವಲ್ ರೇವಣ್ಣನನ್ನು ಕೂಡಲೇ ಬಂಧಿಸಬೇಕು. ಮಹಿಳೆಯರ ಲೈಂಗಿಕ ವಿಡಿಯೋ ಸಂಗ್ರಹಿಸಿದವರ ಮತ್ತು ಹಂಚಿದವರನ್ನೂ ಬಂಧಿಸಬೇಕು. ಲೈಂಗಿಕ ದೌರ್ಜನ್ಯಕ್ಕೊಳಗಾದವರಿಗೆ ಅತ್ಮಸ್ಥೆರ್ಯ ತುಂಬಿ, ಹೆಣ್ಣು ಸಂಕುಲದ ಘನತೆ ಎತ್ತಿ ಹಿಡಿಯಬೇಕು. ಹಾಗೂ ಅಪರಾಧಿಗೆ ಶಿಕ್ಷೆಯಾಗಬೇಕೆ ಹೊರತು ಲೈಂಗಿಕ ದೌರ್ಜನ್ಯಕ್ಕೊಳಗಾದವರಿಗೆ ಶಿಕ್ಷೆಯಾಗಬಾರದು ಎಂಬ ಬೇಡಿಕೆಗಳನ್ನು ಇರಿಸಿಕೊಂಡು ಬೃಹತ್ ಪ್ರತಿಭಟನೆಯನ್ನು ರೂಪಿಸಲಾಗಿದೆ.

    ಪ್ರತಿಭಟನಾ ಸಭೆಯಲ್ಲಿ ಹಿರಿಯ ಸಾಹಿತಿ ಕೆ.ಮರುಳಸಿದ್ಧಪ್ಪ, ಪ್ರೊ.ಎಸ್.ಜಿ.ಸಿದ್ಧರಾಮಯ್ಯ, ಜಿ.ರಾಮಕೃಷ್ಣ, ವಿಜಯಾ, ಕೆ.ಎಸ್.ವಿಮಲ, ಬಂಜಗೆರೆ ಜಯಪ್ರಕಾಶ್, ಬಿ.ಸುರೇಶ್, ದಿನೇಶ ಅಮೀನಮಟ್ಟು, ಕೆ.ವಿ.ನಾಗರಾಜಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು.

    ಪ್ರಜ್ವಲ್ ರೇವಣ್ಣ ಬಂಧನಕ್ಕೆ ಪ್ರಗತಿಪರ ಚಿಂತಕರ ಆಗ್ರಹ; ಹೋರಾಟದ ನಡಿಗೆ ಹಾಸನದ ಕಡೆಗೆ

    ಕೇಂದ್ರ, ಕುಟುಂಬಸ್ಥರ ನಡೆಗೆ ಆಕ್ಷೇಪ

    ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ಮತ್ತು ಕುಟುಂಬಸ್ಥರ ನಡೆಗೆ ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಷ್ಟು ದೊಡ್ಡ ಹಗರಣದಲ್ಲಿ ಭಾಗಿಯಾದ ವ್ಯಕ್ತಿ ಕಾನೂನಿನಿಂದ ತಪ್ಪಿಸಿಕೊಂಡಿರುವುದು ಸರಿಯಲ್ಲ. ಕೂಡಲೇ ಆತನ ಬಂಧನವಾಗಬೇಕು. ಸಂತ್ರಸ್ಥ ಹೆಣ್ಣುಮಕ್ಕಳಿಗೆ ನ್ಯಾಯ ದೊರೆಯಬೇಕು. ಹಾಗೂ ಸಂತ್ರಸ್ಥೆಯರ ಗೌಪ್ಯತೆ ಕಾಪಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

    ಪ್ರಜ್ವಲ್ ಕುಟುಂಬಸ್ಥರು ಇಷ್ಟು ದೊಡ್ಡ ಪಾಪಕೃತ್ಯದ ಬಗ್ಗೆ ಈವರೆಗೆ ಒಂದೂ ಪ್ರಾಯಶ್ಚಿತ್ತದ ಮಾತಾಡಿಲ್ಲ. ಬದಲಾಗಿ ವಿಷಯ ಗೊತ್ತಿದ್ದರೂ ಆತನಿಗೆ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡಿರುವುದು ಪರೋಕ್ಷವಾಗಿ ಪ್ರಕರಣದಲ್ಲಿ ಎಲ್ಲರೂ ಭಾಗಿಯಾದಂತಾಗಿದೆ. ಮಾತ್ರವಲ್ಲ ಆತನನ್ನು ಚುನಾಯಿಸಲು ಮತ ನೀಡಿದ ಮತದಾರರ ಮೇಲೂ ಪಾಪದ ಹೊರೆ ಹೊರಿಸಿದ್ದಾರೆ. ಇದರ ಬಗ್ಗೆ ಸೂಕ್ತ ತನಿಖೆಯಾಗಬೇಕು. ಮೊದಲು ಆರೋಪಿಯನ್ನು ಬಂಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts