ಪುತ್ತೂರು ಗ್ರಾಮಾಂತರ: ಜಾಗದ ವಿವಾದದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ ಘಟನೆ ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆ ಎಂಬಲ್ಲಿ ನಡೆದಿದೆ.
ಪೆರ್ನಾಜೆ ನಿವಾಸಿ ರಾಮಚಂದ್ರ ಎಂಬುವರು ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನೆರೆಯ ನಿವಾಸಿಗಳಾದ ಶ್ವೇತಕುಮಾರ್, ಉಮೇಶ್, ಜಯರಾಮ, ಕಿರಣ್ ಮತ್ತು ಮನೋಜ್ ಎಂಬುವರು ತನಗೆ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿ, ಜೀವ ಬೆದರಿಕೆಯೊಡ್ಡಿರುವುದಾಗಿ ದೂರಿನಲ್ಲಿ ಆರೋಪಿಸಿದ್ದಾರೆ.
ಆರೋಪಿಗಳು ಜಾಗದ ಗಡಿ ಭಾಗದಲ್ಲಿ ಬೇಲಿ ಹಾಕುತ್ತಿದ್ದರು. ಇದನ್ನು ನೋಡಿ ರಾಮಚಂದ್ರ ಪುತ್ರ ರವಿರಾಜ್‌ಗೆ ಕರೆ ಮಾಡಿ ಕರೆಸಿಕೊಂಡು ಗಡಿಸ್ಥಳದ ಹತ್ತಿರದಲ್ಲಿರುವ ಕೆಮ್ಮತ್ತಡ್ಕ-ಪೆರ್ನಾಜೆ ರಸ್ತೆಗೆ ತೆರಳಿ ಬೇಲಿ ಹಾಕುತ್ತಿದ್ದವರಲ್ಲಿ ನಮ್ಮ ಸ್ಥಳಕ್ಕೆ ನೀವ್ಯಾಕೆ ಬೇಲಿ ಹಾಕುತ್ತಿದ್ದೀರಿ? ಎಂದು ಪ್ರಶ್ನಿಸಿದ್ದಾರೆ. ಆ ವೇಳೆ ಆರೋಪಿಗಳು ರಸ್ತೆಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಮೇಲೆ ಹಲ್ಲೆ ನಡೆಸಿ ಬೆದರಿಕೆಯೊಡ್ಡಿದ್ದಾರೆ ಎಂದು ರಾಮಚಂದ್ರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.