ಜಿಲ್ಲೆ

ದುರ್ಬಲ ಏಳಿಗೆಗೆ ಯುವಜನರ ಶ್ರಮ ಅಗತ್ಯ: ಅಬ್ದುಲ್ ಖಾದರ್ ಮುಸ್ಲಿಯಾರ್ ಸಲಹೆ

ಮೂಲ್ಕಿ: ಯುವ ಸಮುದಾಯ ಸಾಮಾಜಿಕ ಜಾಲತಾಣ, ದುಶ್ಚಟಗಳಿಂದ ದೂರವಿದ್ದು, ಸಮಾಜದ ದುರ್ಬಲ ವರ್ಗದವರ ಏಳಿಗೆಗೆ ಶ್ರಮಿಸಿ ಸೌಹಾರ್ದತೆಗೆ ಒತ್ತು ನೀಡಬೇಕಾಗಿದೆ ಎಂದು ಸಮಸ್ತ ಕೇರಳ ಜಂ ಇಯ್ಯತುಲ್ ಉಲಾಮಾ ಕೇಂದ್ರ ಮುಶಾವರದ ಸದಸ್ಯ ಖಾಜಿ ಬಂಬ್ರಾಣ ಬಿಕೆ ಅಬ್ದುಲ್ ಖಾದರ್ ಮುಸ್ಲಿಯಾರ್ ಹೇಳಿದರು.

ಕಾರ್ನಾಡು ಜಿಂದಾ ಮದರ್ ಷಾ ದರ್ಗಾ ವಠಾರದಲ್ಲಿ ನಡೆದ ಕಾರ್ನಾಡು ಹಿಮಾಯತುಲ್ ಇಸ್ಲಾಂ ಸಮಿತಿಯ 48ನೇ ವಾರ್ಷಿಕೋತ್ಸವದ ಸಮಾರೋಪ ಕಾರ್ಯಕ್ರಮ, ಬಡ ಮುಸ್ಲಿಂ ಹೆಣ್ಣು ಮಕ್ಕಳ ಮದುವೆಗಾಗಿ ಧನ ಸಹಾಯ, ಧಾರ್ಮಿಕ ಮತ ಪ್ರವಚನ, ಸಾಧಕರಿಗೆ ಗೌರವ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.

ಸಮಸ್ತ ಕೇಂದ್ರ ಮುಶಾವರ ಸದಸ್ಯ, ಮೂಲ್ಕಿ ಶಾಫಿ ಜುಮಾಮಸೀದಿ ಖತೀಬ ಉಸ್ಮಾನುಲ್ ಫೈಜಿ ತೊಡಾರ್ ಉದ್ಘಾಟನೆ ನೆರವೇರಿಸಿದರು.

ಮೂಲ್ಕಿ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಸುಹೈಲ್ ಹೈದರ್ ಎಂ.ಕೆ. ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬಡ ಮುಸ್ಲಿಂ ಹೆಣ್ಣು ಮಕ್ಕಳ ಮದುವೆಗಾಗಿ ಧನ ಸಹಾಯ ಹಾಗೂ ಸಾಧಕರ ನೆಲೆಯಲ್ಲಿ ಯುವ ಉದ್ಯಮಿ ಅಬ್ದುಲ್ ಲತೀಫ್ ಗುರುಪುರ ಅವರನ್ನು ಗೌರವಿಸಲಾಯಿತು.

ಕಾರ್ನಾಡ್ ಮಸ್ಜಿದುನ್ನೂರು ಖತೀಬ ಇಸ್ಮಾಯಿಲ್ ದಾರಿಮಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ, ರಾಜ್ಯ ವಿಧಾನ ಪರಿಷತ್ ಶಾಸಕ ಐವಾನ್ ಡಿಸೋಜಾ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಮುಲ್ಕಿ ನಪಂ ಸದಸ್ಯ ಪುತ್ತು ಬಾವ, ತಾಲೂಕು ಸಂವಿಧಾನ ಸಂರಕ್ಷಣಾ ಹೋರಾಟ ವೇದಿಕೆ ಅಧ್ಯಕ್ಷ ಇಕ್ಬಾಲ್ ಅಹ್ಮದ್, ಕೇಂದ್ರ ಜುಮಾ ಮಸೀದಿ ಕಾರ್ಯದರ್ಶಿ ಫಾರೂಕ್ ಹಾಜಿ, ಮುಲ್ಕಿ ನಪಂ ಮಾಜಿ ಉಪಾಧ್ಯಕ್ಷ ಅಬೂಬಕ್ಕರ್, ಉದ್ಯಮಿ ಜಮಾಲ್ ಕೋಲ್ನಾಡ್ ಸೌದಿ ಅರೇಬಿಯಾ, ಮುಸ್ಲಿಂ ಯಂಗ್ ಮೆನ್ಸ್ ಅಸೋಸಿಯೇಷನ್ ಅಧ್ಯಕ್ಷ ಅಲ್ ಫಾಜ್, ಖಲೀಲ್ ದಾರೀಮಿ, ಅಬ್ದುಲ್ ರಜಾಕ್, ಕಾರ್ನಾಡ್ ಮದನಿ, ಹಿಮಾಯತುಲ್ ಇಸ್ಲಾಂ ಸಮಿತಿ ಅಧ್ಯಕ್ಷ ರಿಯಾಝ್ ಮೊಯಿದಿನ್ ಮತ್ತಿತರರು ಉಪಸ್ಥಿತರಿದ್ದರು.

ಕಾರ್ನಾಡ್ ಮಸೀದಿಯಿಂದ ದರ್ಗಾ ರಸ್ತೆಯಾಗಿ ದರ್ಗಾಗೆ ಸಂದಲ್ ಮೆರವಣಿಗೆ ನಡೆಯಿತು. ಮೊಹಮ್ಮದ್ ಗಜಾಲ್ ಕೋಲ್ನಾಡ್ ನಿರೂಪಿಸಿದರು.