ಜಿಲ್ಲೆ

''ಮೋದಿಗೆ ಮತ ಹಾಕಿ" ಎಂಬ ವಾಕ್ಯ ಮುದ್ರಿಸಿದ್ದವನ ವಿರುದ್ಧ ಹೂಡಿದ್ದ ಎಫ್​ಐಆರ್​ಗೆ ಹೈಕೋರ್ಟ್​ ತಡೆ | High Court

ಬೆಂಗಳೂರು: 2024ರ ಲೋಕಾಸಭಾ ಚುನಾವಣೆಯಲ್ಲಿ ಮೋದಿಗೆ ವೋಟ್​ ಮಾಡಿ (Vote For Modi) ಎಂದು ತಮ್ಮ ಮದುವೆಯ ಆಮಂತ್ರಣ ಪ್ರತಿಕೆಯಲ್ಲಿ ಮುದ್ರಿಸಿದ್ದ ವ್ಯಕ್ತಿ ವಿರುದ್ಧ ಹಾಕಲಾಗಿದ್ದ ಎಫ್​ಐಆರ್​ ಸೇರಿ ಎಲ್ಲಾ ಕ್ರಿಮಿನಲ್​ ಮೊಕದ್ದಮೆಗಳಿಗೆ ಇದೀಗ ಹೈಕೋರ್ಟ್(High Court)​ ತಡೆ ನೀಡಿದೆ.

ನ.11ರಂದು ನ್ಯಾಯಮೂರ್ತಿ ನಾಗಪ್ರಸನ್ನ ಅವರು ಮಧ್ಯಂತರ ತಡೆ ಆಜ್ಞೆಯನ್ನು ಜಾರಿಗೊಳಿಸಿದರು. ಅಲ್ಲದೆ, ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿ ಶಿವಪ್ರಸಾದ್​ ಸಲ್ಲಿಸಿದ್ದ ತಡೆ ಅರ್ಜಿಗೆ ಉತ್ತರ ನೀಡುವಂತೆ ಕರ್ನಾಟಕ ಸರ್ಕಾರಕ್ಕೆ ಮತ್ತು ಪ್ರಕರಣದ ಮೂಲ ದೂರುದಾರ ಮತಗಟ್ಟೆ ಅಧಿಕಾರಿಗೆ ನೋಟಿಸ್​ ನೀಡಿದರು.

ಪ್ರಕರಣದ ಹಿನ್ನೆಲೆ

ಶಿವ ಪ್ರಸಾದ್​ ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ''ಮೋದಿಗೆ ವೋಟ್​ ಹಾಕಿ, ಇದು ನನ್ನ ಮದುವೆಗೆ ಉಡುಗೊರೆ'' ಎಂಬ ಸಾಲು ಮುದ್ರಿಸಿದ್ದರು. ಇದು ಚುನಾವಣಾ ನೀತಿ ಸಂಹಿತೆ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂದು ದೂರುದಾರರು ತಿಳಿಸಿದ್ದರು. ಹೀಗಾಗಿ, ಇದೇ ವರ್ಷದ ಏ.25ರಂದು ಶಿವಪ್ರಸಾದ್​ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 188​ ಮತ್ತು ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್​ 127ಎ ಅಡಿಯಲ್ಲಿ, ಚುನಾವಣಾಧಿಕಾರಿ ಸಂದೇಶ್​ ಕೆ.ಎನ್​ ಪ್ರಕರಣ ದಾಖಲಿಸಿಕೊಂಡಿದ್ದರು.

ವಾದದಲ್ಲಿ ಏನಿದೆ?

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ವಿನೋದ್​ ಕುಮಾರ್​, ''ಆಮಂತ್ರಣ ಪತ್ರಿಕೆಯನ್ನು ಮಾರ್ಚ್​ 1ರಂದು ಮುದ್ರಿಸಲಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿ ಘೋಷಿಸಿಸುವ ಮುಂಚಿತವಾಗಿಯೇ ಮುದ್ರಿಸಲಾಗಿದೆ. ಮಾರ್ಚ್​ 16ರಂದು ​ನೀತಿ ಸಂಹಿತೆ ಜಾರಿಯಾಗಿದ್ದು, ದೂರದಾರ ಒಂದು ತಿಂಗಳ ಬಳಿಕ ಏಪ್ರಿಲ್​​ 19ರಂದು ದೂರು ನೀಡಿದ್ದಾನೆ. ಹೀಗಾಗಿ, ಅರ್ಜಿದಾರ ಶಿವ ಪ್ರಸಾದ್​ ಯಾವುದೇ ತಪ್ಪು ಮಾಡಿಲ್ಲ. ನೀತಿ ಸಂಹಿತೆ ಜಾರಿಯಲ್ಲಿ ಇರುವಾಗ ಮಾತ್ರ ಪ್ರಜಾಪ್ರತಿನಿಧಿ ಕಾಯ್ದೆ ಅನ್ವಯವಾಗುತ್ತೆ" ಎಂದಿದ್ದಾರೆ. ವಾದ ಆಲಿಸಿದ ನ್ಯಾ.ನಾಗಪ್ರಸನ್ನ ಸಿಆರ್​ಪಿಸಿ ನಿಂಬಂಧನೆಗಳನ್ನು ಅನುಸರಿಸಲು ಮ್ಯಾಜಿಸ್ಟ್ರೇಟ್​ ವಿಫಲವಾಗಿದೆ ಎಂದರು.

ಈ ಪ್ರಕರಣದ ಅಂತಿಮ ವಿಚಾರಣೆ ನಡೆಯುವವರೆಗೂ ಪ್ರಕರಣದ ಎಲ್ಲಾ ಪ್ರಕ್ರಿಯೆಗಳಿಗೆ ತಡೆ ನೀಡಿ ಮಧ್ಯಂತರ ಆದೇಶ ನೀಡುವಂತೆ ಅರ್ಜಿದಾರರು ನ್ಯಾಯಾಲಯವನ್ನು ಒತ್ತಾಯಿಸಿದ್ದರು. ಇದೀಗ ಅರ್ಜಿ ವಿಚಾರಣೆಯನ್ನು ಕೋರ್ಟ್​ ಡಿ.12ಕ್ಕೆ ಮುಂದೂಡಿದೆ, (ಏಜೆನ್ಸೀಸ್​).