ರಾಘವೇಂದ್ರ ಪೈ ಗಂಗೊಳ್ಳಿ
ಹಳೇ ವಿಧಾನ ಕೈಬಿಟ್ಟು ಡಿಜಿಟಲ್ ಮಾದರಿ ಜನನ ಪ್ರಮಾಣ ಪತ್ರ ನಿಯಮ ಜಾರಿಗೊಳಿಸಿದ್ದರಿಂದ ಸಮಸ್ಯೆ ಎದುರಾಗಿದ್ದು, ಹದಿನಾರು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಆಧಾರ್ ಕಾರ್ಡ್‌ನಲ್ಲಿ ಹೆಸರು ತಿದ್ದುಪಡಿಗೊಳಿಸಲು ಅಸಾಧ್ಯವಾಗಿದೆ.
ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳು ಇದರಿಂದ ಸಮಸ್ಯೆ ಎದುರಿಸುವಂತಾಗಿದೆ. ಆಧಾರ್‌ಕಾರ್ಡ್‌ನಲ್ಲಿರುವ ನ್ಯೂನತೆಗಳ ಸರಿಪಡಿಸಿಕೊಳ್ಳಲಾಗದೇ ಇರುವುದರಿಂದ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ವರ್ಷದ ಕುರಿತು ಈಗಾಗಲೇ ಚಿಂತಿತರಾಗಿದ್ದಾರೆ. 16 ವರ್ಷಗಳಿಗಿಂತ ಕಡಿಮೆ ವಯಸ್ಸಿನ ವಿದ್ಯಾರ್ಥಿಗಳ ಜನನಪ್ರಮಾಣ ಪತ್ರವನ್ನು ಶೀಘ್ರವೇ ಡಿಜಿಟಲೀಕರಣಗೊಳಿಸುವಂತೆ ಸರ್ಕಾರದ ಆದೇಶವಿದ್ದರೂ ಆಡಳಿತ ಕಚೇರಿಯಲ್ಲಿ ಇನ್ನೂ ವೇಗ ಪಡೆದುಕೊಳ್ಳದಿರುವುದರಿಂದ ಮಕ್ಕಳು ಹಾಗೂ ಪಾಲಕರು ದಿನಂಪ್ರತಿ ಸರ್ಕಾರಿ ಕಚೇರಿಗೆ ಅಲೆದಾಡುವ ದುಸ್ಥಿತಿ ಎದುರಾಗಿದೆ.
ಕೈ ಬರಹದಲ್ಲಿರುವ ಜನನ ಪ್ರಮಾಣಪತ್ರವನ್ನು ಸ್ಕಾೃನ್ ಮಾಡಿ ಡಿಜಿಟಲೀಕರಣಗೊಳಿಸಲು ಈಗಾಗಲೇ ಅನೇಕ ಬಾರಿ ಪ್ರಯತ್ನಿಸಲಾಗಿದೆ. ಆದರೆ ಆಧಾರ್ ತಂತ್ರಾಂಶ ಸ್ವೀಕಾರಗೊಳ್ಳದಿರುವುದರಿಂದ ಹೆಸರು ಸಹಿತ ವಿವಿಧ ತಿದ್ದುಪಡಿಗೆ ಡಿಜಿಟಲ್ ಜನನ ಪ್ರಮಾಣ ಪತ್ರ ಪಡೆಯುವುದು ಅನಿವಾರ್ಯವಾಗಿದೆ. ಈ ಕುರಿತು ಪಾಲಕರಲ್ಲಿ ಈಗಾಗಲೇ ಹಲವು ಗೊಂದಲಗಳು ಉಂಟಾಗಿದ್ದು, ಡಿಜಿಟಲ್ ಜನನ ಪ್ರಮಾಣ ಪತ್ರ ಪಡೆಯುವ ಕುರಿತು ಅನೇಕರಿಗೆ ಇನ್ನೂ ಮಾಹಿತಿ ಕೊರತೆ ಇದೆ. ಹೀಗಾಗಿ ಪಾಲಕರು, ವಿದ್ಯಾರ್ಥಿಗಳು ಗ್ರಾಮ ಪಂಚಾಯಿತಿ, ಗ್ರಾಮ ಆಡಳಿತ ಕಚೇರಿ ಹಾಗೂ ತಾಲೂಕು ಆಡಳಿತ ಕಚೇರಿಗೆ ಅಲೆದಾಡುವಂತಾಗಿದೆ.
ಹದಿನಾರು ವರ್ಷಕ್ಕಿಂತ ಕೆಳಗಿನ ಮಕ್ಕಳ ಆಧಾರ್ ಕಾರ್ಡ್‌ನಲ್ಲಿ ಹೆಸರು ತಿದ್ದುಪಡಿಗೊಳಿಸಲು ಡಿಜಿಟಲ್ ಪ್ರಮಾಣ ಪತ್ರವನ್ನೇ ಪೂರಕ ದಾಖಲೆಯಾಗಿ ನೀಡಬೇಕೆಂಬ ನಿಯಮ ರೂಪಿಸಿದ್ದು, ಇದನ್ನು ಬಳಸಿದರಷ್ಟೇ ಆಧಾರ್ ತಿದ್ದುಪಡಿ ಸಾಧ್ಯವಾಗಲಿದೆ. ಆದರೆ ಈ ವಯೋಮಿತಿಗಿಂತ ಕೆಳಗಿನ ಬಹುತೇಕ ಮಕ್ಕಳದ್ದು ಕೈ ಬರಹದ ಜನನ ಪ್ರಮಾಣ ಪತ್ರವಿದ್ದು, ಇದನ್ನು ಡಿಜಿಟಲೀಕರಣಗೊಳಿಸಲು ಪಾಲಕರು ಹೆಣಗಾಡಬೇಕಿದೆ.
ಆಧಾರ್ ಕಾರ್ಡ್‌ನಲ್ಲಿ ಹೆಸರು ತಿದ್ದುಪಡಿ ಸಂದರ್ಭ ಕೈಬರಹರದ ಜನನ ಪ್ರಮಾಣ ಪತ್ರವನ್ನು ಆಧಾರ್ ತಂತ್ರಾಂಶ ಸ್ವೀಕರಿಸದಿರುವ ತಾಂತ್ರಿಕ ಸಮಸ್ಯೆಯಿಂದ ಡಿಜಿಟಲ್ ಜನನ ಪ್ರಮಾಣ ಪತ್ರ ನೀಡಬೇಕಾಗಿದೆ. 15 ವರ್ಷಗಳ ಹಿಂದಿನ ಜನನ ಪ್ರಮಾಣ ಪತ್ರವನ್ನು ಡಿಜಿಟಲ್ ಮಾಡಿ ಇಟ್ಟುಕೊಳ್ಳಬೇಕಿದೆ. ತಾಲೂಕು ಕಚೇರಿಯಲ್ಲಿ ಅರ್ಜಿ ಸಲ್ಲಿಸಿದರೆ ಕೂಡಲೇ ಡಿಜಿಟಲ್ ಜನನ ಪ್ರಮಾಣ ಪತ್ರ ನೀಡಲಾಗುತ್ತದೆ. -ಶಿವರಾಯ, ಗಂಗೊಳ್ಳಿ ಗ್ರಾಮ ಆಡಳಿತ ಅಧಿಕಾರಿ ಆಧಾರ್‌ಕಾರ್ಡ್‌ನಲ್ಲಿ ಹೆಸರು ತಿದ್ದುಪಡಿ ಮಾಡಲು ಕೈಬರಹದ ಜನನ ಪ್ರಮಾಣ ಪತ್ರ ತಿರಸ್ಕರಿಸಲಾಗುತ್ತಿದೆ. ಡಿಜಿಟಲ್ ಜನನ ಪ್ರಮಾಣಪತ್ರ ಇದ್ದರೆ ಮಾತ್ರ ತಿದ್ದುಪಡಿ ಸಾಧ್ಯ ಎಂದು ಆಧಾರ್ ಕೇಂದ್ರದ ಸಿಬ್ಬಂದಿ ಹೇಳುತ್ತಿದ್ದಾರೆ. ಇದರಿಂದ ಬಹಳಷ್ಟು ತೊಂದರೆಯಾಗುತ್ತಿದ್ದು, ಡಿಜಿಟಲ್ ಜನನ ಪ್ರಮಾಣ ಪತ್ರ ಪಡೆಯಲು ಪದೇಪದೆ ಅಲೆದಾಡಬೇಕಾಗಿದೆ -ಚಂದ್ರ ಖಾರ್ವಿ, ಗಂಗೊಳ್ಳಿ ನಿವಾಸಿ
*ಡಿಜಿಟಲ್ ಜನನಪ್ರಮಾಣ ಪತ್ರ ನಿಯಮದಿಂದ ಮಕ್ಕಳಿಗೆ ತೊಂದರೆ *ಬಹುತೇಕ ವಿದ್ಯಾರ್ಥಿಗಳಲ್ಲಿ ಕೈ ಬರದ ಬರ್ತ್ ಸರ್ಟಿಫಿಕೆಟ್ ಲಭ್ಯ *ಸ್ಕಾೃನಿಂಗ್ ಸಂದರ್ಭ ತಂತ್ರಾಂಶ್ವ ಸ್ವೀಕರಾಗೊಳ್ಳದಿರುವುದರಿಂದ ಡಿಜಿಟಲೀಕರಣ ಅಗತ್ಯ *ಸರ್ಕಾರಿ ಕಚೇರಿಗಳಿಗೆ ಸತತ ಅಲೆದಾಟ, ಪಾಲಕರ ಗೋಳು