ಜಿಲ್ಲೆ

ಹಳ್ಳಿಗಳ ಅಭಿವೃದ್ಧಿಯೇ ದೇಶದ ಪ್ರಗತಿ

ವಿಜಯವಾಣಿ ಸುದ್ದಿಜಾಲ ಕಾರ್ಕಳ ಮಣ್ಣುಪಳ್ಳ ಮಣಿಪಾಲವಾಗಿ, ನಂತರ ಮಣಿಪಾಲ ಶಿಕ್ಷಣ ಸಂಸ್ಥೆಗಳಾಗಿ ಇದೀಗ ಮಣಿಪಾಲ ಜ್ಞಾನಸುಧಾವಾಗಿ ಬೆಳಗುತ್ತಿರುವುದು ಅತ್ಯಂತ ಸಂತೋಷದ ವಿಷಯ. ಹಳ್ಳಿಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಎಂಬಂತೆ ಹಳ್ಳಿಯಾಗಿದ್ದ ಮಣಿಪಾಲ ಇದೀಗ ಸರ್ವರ ಸಂತೋಷಕ್ಕೆ ಕಾರಣವಾಗಿ ಮುನ್ನಡೆಯುತ್ತಿರುವುದು ಎಲ್ಲರಿಗೂ ಹೆಮ್ಮೆಯ ಸಂಗತಿ ಎಂದು ಮಣಿಪಾಲ ಗ್ರೂಪ್ಸ್ ಅಧ್ಯಕ್ಷ ಟಿ.ಸುಧಾಕರ್ ಪೈ ಹೇಳಿದರು. ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ಕಟ್ಟಡ ಲೋಕಾರ್ಪಣೆ, ವಿದ್ಯಾನಗರ ಗ್ರೀನ್ಸ್ ಕ್ರೀಡಾಂಗಣ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಣಿಪಾಲ ಜ್ಞಾನಸುಧಾ ನವೀಕೃತ ಕಟ್ಟಡ ಉದ್ಘಾಟಿಸಿ ಮಾತನಾಡಿದ ಶಾಸಕ ಯಶ್‌ಪಾಲ್ ಸುವರ್ಣ, ಶಿಕ್ಷಣ ಕಾಶಿ ಉಡುಪಿಗೆ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳಿಂದ ತರಬೇತಿ ಸಿಗಬೇಕು. ಆ ಮೂಲಕ ಕನಸಿನ ಭಾರತ ನಿರ್ಮಾಣವಾಗಲಿ ಎಂದರು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿ, ಜ್ಞಾನಕ್ಕಿಂತ ಮಿಗಿಲಾದುದು ಯಾವುದಿಲ್ಲ. ಜ್ಞಾನಸುಧಾದ ವಿದ್ಯಾರ್ಥಿಗಳು ದೇಶದ ಆಸ್ತಿಯಾಗಿ ಬೆಳೆಯಲಿ ಎಂದರು. ಮಾಜಿ ಶಾಸಕ ರಘುಪತಿ ಭಟ್ ವಿದ್ಯಾನಗರ ಗ್ರೀನ್ಸ್ ಕ್ರೀಡಾಂಗಣ ಉದ್ಘಾಟಿಸಿದರು. ಜಯ ಸುಧಾಕರ ಪೈ ಅವರು ಶಾಂತಿ ರಮೇಶ ಪೈ ಸ್ಮಾರಕ ಸಭಾಂಗಣವನ್ನು, ಶಕ್ತಿ ಎಜುಕೇಶನ್ ಟ್ರಸ್ಟ್‌ನ ಸಂಸ್ಥಾಪಕ ಡಾ.ಕೆ.ಸಿ.ನಾಯ್ಕ ಅಜೆಕಾರು ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್‌ನ ಕಚೇರಿ ಉದ್ಘಾಟಿಸಿದರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ, ಮಣಿಪಾಲ ಹೈಸ್ಕೂಲ್ ಟ್ರಸ್ಟ್ ಸಂಚಾಲಕ ಪ್ರಕಾಶ್ ಶೆಟ್ಟಿ, ಅಜೆಕಾರು ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್‌ನ ಟ್ರಸ್ಟಿಗಳು, ಆಡಳಿತ ಮಂಡಳಿ ಸದಸ್ಯರು, ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಿಇಒ, ಪ್ರಾಂಶುಪಾಲರು, ಉಪ ಪ್ರಾಂಶುಪಾಲರು ಉಪಸ್ಥಿತರಿದ್ದರು. ಅಜೆಕಾರು ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ಶಮಿತಾ ಕಾರ್ಯಕ್ರಮ ನಿರೂಪಿಸಿದರು.

ವಿದ್ಯಾರ್ಥಿಗಳಿಗೆ ಸನ್ಮಾನ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ರ‌್ಯಾಂಕ್ ಗಳಿಸಿದ ಸ್ವಸ್ತಿ ಕಾಮತ್, ಪಿಯುಸಿಯಲ್ಲಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಮೂರನೇ ರ‌್ಯಾಂಕ್, ಜಿಲ್ಲೆಗೆ ಪ್ರಥಮ ರ‌್ಯಾಂಕ್ ಪಡೆದ ರಕ್ಷಾ ರಾಮಚಂದ್ರ, ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಐದನೇ ರ‌್ಯಾಂಕ್, ಉಡುಪಿಗೆ ಪ್ರಥಮ ರ‌್ಯಾಂಕ್ ಪಡೆದ ಆಸ್ತಿ ಶೆಟ್ಟಿ, ಜೆ.ಇ.ಇ. ಮೈನ್ಸ್‌ನಲ್ಲಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಕಾರ್ಕಳ ಜ್ಞಾನಸುಧಾದ ಆಕಾಶ್‌ಎಚ್.ಪ್ರಭು, ಉಡುಪಿ ಜ್ಞಾನಸುಧಾಕ್ಕೆ ಪ್ರಥಮ ಸ್ಥಾನಿಯಾದ ಅಪೂರ್ವ್ ವಿ.ಕುಮಾರ್ ಅವರನ್ನು ಸನ್ಮಾನಿಸಲಾಯಿತು.