ಶಿಕ್ಷಕರ ಕೊರತೆ ಎದುರಿಸುತ್ತಿರುವ ಶತಮಾನೋತ್ಸವ ಕಂಡ ನಂದಳಿಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಜಿಲ್ಲೆ

ಶತಮಾನ ಕಂಡ ಶಾಲೆಗೆ ಶಿಕ್ಷಕರ ಕೊರತೆ, 81 ವಿದ್ಯಾರ್ಥಿಗಳಿಗೆ ಏಕೋಪಾಧ್ಯಾಯ, ಸಕಲ ವ್ಯವಸ್ಥೆಯಿದ್ದರೂ ಸರ್ಕಾರದ ನಿರ್ಲಕ್ಷ

ಇಂದಿರಾ ಎನ್ ಕೆ

ಹರಿಪ್ರಸಾದ್ ನಂದಳಿಕೆ ಕಾರ್ಕಳ

ಶತಮಾನ ಕಂಡ ಸರ್ಕಾರಿ ಶಾಲೆಯಲ್ಲಿ ಸುಂದರ ಕಟ್ಟಡ, ಮೂಲಸೌಕರ್ಯ, ವಿದ್ಯಾರ್ಥಿಗಳ ಸಂಖ್ಯೆ ಎಲ್ಲವೂ ಇದ್ದರೂ ಶಿಕ್ಷಕರ ಕೊರತೆ ಕಾಡುತ್ತಿದ್ದು ಈ ಬಗ್ಗೆ ಶಿಕ್ಷಣ ಇಲಾಖೆ ಸ್ಪಂದಿಸಬೇಕಿದೆ.

ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮದಲ್ಲಿ ನೂರು ವರ್ಷಗಳ ಹಿಂದೆ ಆಂಗ್ಲರ ಆಳ್ವಿಕೆ ಕಾಲದಲ್ಲಿ ಊರಿನವರೇ ಆರಂಭಿಸಿದ ಶಾಲೆಯಾಗಿದ್ದು, ಬೋರ್ಡ್ ಶಾಲೆ ಎಂದು ಪ್ರಸಿದ್ಧಿ ಪಡೆದಿದೆ. ಒಂದು ಕಾಲದಲ್ಲಿ ಶಾಲೆ ತುಂಬಾ ವಿದ್ಯಾರ್ಥಿಗಳು ಹಾಗೂ ತರಗತಿಗೊಬ್ಬರಂತೆ ಶಿಕ್ಷಕರಿದ್ದರು. ಇದೀಗ ವಿದ್ಯಾರ್ಥಿಗಳ ಸಂಖ್ಯೆ ಇದ್ದರೂ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ನಿರ್ಲಕ್ಷೃದಿಂದ ಶಿಕ್ಷಕರ ಕೊರತೆ ಕಾಡುತ್ತಿದೆ.

ಒಬ್ಬರೇ ಶಿಕ್ಷಕ

ನಂದಳಿಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ವವ್ಯವಸ್ಥೆಗಳಿದ್ದು ಪ್ರಸ್ತುತ 81 ವಿದ್ಯಾರ್ಥಿಗಳಿದ್ದರೂ ಕೇವಲ ಇಲಾಖೆ ವತಿಯಿಂದ ಕರ್ತವ್ಯ ನಿರ್ವಹಿಸುತ್ತಿರುವ ಕೇವಲ ಇಬ್ಬರು ಶಿಕ್ಷಕರಿದ್ದು ಶಾಲೆ ಭವಿಷ್ಯ ಅತಂತ್ರವಾಗಿದೆ. ಮುಖ್ಯಶಿಕ್ಷಕರನ್ನು ಸೇರಿಸಿ ಕರ್ತವ್ಯ ನಿರ್ವಹಿಸುತ್ತಿರುವ ಇಬ್ಬರು ಶಿಕ್ಷಕರ ಪೈಕಿ ಸಹ ಶಿಕ್ಷಕ ಸದಾನಂದ ಶೆಟ್ಟಿ ಮೇ 31ರಂದು ನಿವೃತ್ತರಾಗಿದ್ದಾರೆ. ಜೂನ್ 1ರಿಂದ ಕರುಣಾಕರ ನಾಕ್ ಏಕೋಪಾಧ್ಯಾಯ ಶಾಲೆ ಮುಖ್ಯಶಿಕ್ಷಕರಾಗಲಿದ್ದಾರೆ.

ಸಕಲ ವ್ಯವಸ್ಥೆ


ಕನ್ನಡ ಮಾಧ್ಯಮ ಸರ್ಕಾರಿ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಆಂಗ್ಲ ಮಾಧ್ಯಮ ಶಾಲೆಯಂತೆ ಸಕಲ ವ್ಯವಸ್ಥೆ ಒದಗಿಸಬೇಕು ಎನ್ನುವ ನಿಟ್ಟಿನಲ್ಲಿ ದಾನಿ ಹಾಗೂ ಶಿಕ್ಷಣ ಪ್ರೇಮಿ ನಂದಳಿಕೆ ಕಾಪಿಕೆರೆ ಕೃಷ್ಣ ವೈ.ಶೆಟ್ಟಿ ಹಾಗೂ ಇತರ ದಾನಿಗಳ ಸಹಕಾರದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ ವ್ಯವಸ್ಥೆ ಮಾಡಲಾಗಿದೆ. ಮಕ್ಕಳಿಗೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಶಾಲೆಯಲ್ಲಿ ವಿಶಾಲ ಆಟದ ಮೈದಾನ, ಒಳಾಂಗಣ ಕ್ರೀಡಾಂಗಣ, ಕರಾಟೆ, ಯಕ್ಷಗಾನ, ಯೋಗ ತರಬೇತಿ, ಶಾಲೆ ಸುತ್ತಲು ಸುಂದರ ಪಾರ್ಕ್ ನಿರ್ಮಾಣ, ಬಾಲವನ ಹಾಗೂ ಇಂಟರ್‌ಲಾಕ್ ಅಳವಡಿಕೆ ಮತ್ತು ಸುಸಜ್ಜಿತ ರಂಗಮಂದಿರ ನಿರ್ಮಾಣ ಹೀಗೆ ಸಕಲ ವ್ಯವಸ್ಥೆಯನ್ನು ದಾನಿಗಳು, ಹಳೇ ವಿದ್ಯಾರ್ಥಿಗಳು ಆರ್ಥಿಕ ಸಂಪತ್ತು ಕ್ರೊಡೀಕರಿಸಿ ವ್ಯವಸ್ಥೆ ಮಾಡಿದ್ದರೂ ಸರ್ಕಾರಿ ಕಾಯಂ ಶಿಕ್ಷಕರ ಕೊರತೆ ಮಾತ್ರ ಎದ್ದು ಕಾಣುತ್ತಿದೆ.

ಮನವಿಗೆ ಸ್ಪಂದನೆಯಿಲ್ಲ

ಈಗಾಗಲೇ ಇಲ್ಲಿನ ಶಿಕ್ಷಕರ ಕೊರತೆ ನಡುವೆ ದಾನಿಗಳ ನೆರವಿನಿಂದ ಗೌರವ ಶಿಕ್ಷಕರನ್ನು ನೇಮಿಸಿಕೊಂಡು ಕಲಿಕೆಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಹಳೇ ವಿದ್ಯಾರ್ಥಿಗಳು ಮಾಡುತ್ತ ಬಂದರೂ ಕಾಯಂ ಶಿಕ್ಷಕರನ್ನು ಶಾಲೆಗೆ ಒದಗಿಸುವಂತೆ ಹಳೇ ವಿದ್ಯಾರ್ಥಿಗಳು, ಶಾಲಾಭಿವೃದ್ಧಿ ಸಮಿತಿ ಹಾಗೂ ವಿದ್ಯಾವಿಕಾಸ ಸಮಿತಿ ಸದಸ್ಯರು ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ಶಾಲೆಯಲ್ಲಿ ಶಿಕ್ಷಕರಾಗಿ ನಿವೃತ್ತಿ ಪಡೆದ ಲಕ್ಷ್ಮೀಕಾಂತ ಭಟ್ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಗಳಿಸಿದ ಶಿಕ್ಷಕರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ದೇಶ ವಿದೇಶದಲ್ಲಿ ಉನ್ನತ ಸ್ಥಾನಮಾನದಲ್ಲಿದ್ದಾರೆ. ಸರ್ಕಾರಿ ಇಲಾಖೆಗಳಲ್ಲಿ ಮತ್ತು ವೈದ್ಯರಾಗಿ, ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ನಂದಳಿಕೆ, ಬೆಳ್ಮಣ್, ಬೋಳ, ಸೂಡ ಪಡುಬೆಟ್ಟು ಭಾಗಗಳಿಂದ ವಿದ್ಯಾರ್ಥಿಗಳು ವಿದ್ಯಾರ್ಜನೆಗಾಗಿ ಬರುತ್ತಿದ್ದಾರೆ.

ಶಾಲೆಯಲ್ಲಿ ಶಿಕ್ಷಕರ ಕೊರತೆ ಬಗ್ಗೆ ತಾತ್ಕಾಲಿಕ ನೆಲೆಯಲ್ಲಿ ಓರ್ವ ಶಿಕ್ಷಕರನ್ನು ಹಾಗೂ ಮತ್ತೋರ್ವ ಅತಿಥಿ ಶಿಕ್ಷಕರನ್ನು ಮುಂದಿನ 15 ದಿನಗಳಲ್ಲಿ ನೇಮಕ ಮಾಡಲಾಗುವುದು.-ಲೋಕೇಶ್, ಕ್ಷೇತ್ರ ಶಿಕ್ಷಣಾಧಿಕಾರಿ, ಕಾರ್ಕಳ
ನಂದಳಿಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಎಲ್ಲ ಮೂಲಸೌಕರ್ಯ ದಾನಿಗಳ ನೆರವಿನಿಂದ ನೀಡಿದ್ದೇವೆ. ಆದರೆ ಇಲಾಖೆ ಇನ್ನೂ ಶಿಕ್ಷಕರನ್ನು ನೀಡದಿರುವ ಬಗ್ಗೆ ಬೇಸರವಾಗಿದೆ.-ಬಾಲಚಂದ್ರ ಶೆಟ್ಟಿ, ಗೌರವಾಧ್ಯಕ್ಷ, ಹಳೇ ವಿದ್ಯಾರ್ಥಿ ಸಂಘ