ಬೆಂಗಳೂರು: ರಾಜ್ಯ ಸರ್ಕಾರದ ಆದೇಶಾನುಸಾರ 2008ರಲ್ಲಿ ಖಾಯಂಗೊಂಡ ನಿವೃತ್ತ ಶಿಕ್ಷಕೇತರ ನೌಕರರಿಗೆ ನಿವೃತ್ತಿ ನಂತರದ ಸೌಲಭ್ಯಗಳನ್ನು ಮಂಜೂರು ಮಾಡುವಂತೆ ಬೆಂಗಳೂರು ವಿಶ್ವವಿದ್ಯಾಲಯದ ಶಿಕ್ಷಕೇತರ ಸಂಘ ವಿವಿಯ ಅಧಿಕಾರಿಗಳನ್ನು ಒತ್ತಾಯಿಸಿದೆ.
ಈ ಸಂಬಂಧ ಕುಲಸಚಿವರಿಗೆ ಪತ್ರ ಬರೆದಿರುವ ಸಂಘದ ಅಧ್ಯಕ್ಷ ಪಿ.ಶಿವಪ್ಪ ಹಾಗೂ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಯೋಗೇಶ್, ಬೆಂಗಳೂರು ವಿವಿಯಲ್ಲಿ 2008ನೇ ಇಸವಿಯಲ್ಲಿ ಸುಮಾರು 85 ಜನ ಶಿಕ್ಷಕೇತರ ನೌಕರರ ಸೇವೆ ಖಾಯಂಗೊಂಡಿದ್ದು, ಇವರಲ್ಲಿ ಹಲವಾರು ಜನ ವಯೋನಿವೃತ್ತಿ ಪಡೆದಿದ್ದಾರೆ. ಇವರುಗಳಿಗೆ ನೂತನ ಪಿಂಚಣಿ ಯೋಜನೆಯಡಿ ನೀಡಬೇಕಾದ ನಿವೃತ್ತಿ ನಂತರದ ಸೌಲಭ್ಯಗಳು ಸರಿಯಾಗಿ ದೊರೆಯದೆ ಸಮಸ್ಯೆ ಅನುಭವಿಸುತ್ತಿದ್ದಾರೆ.
2022ರ ಸರ್ಕಾರಿ ಆದೇಶದಂತೆ ನಿವೃತ್ತಿ ಉಪದಾನ, ಮರಣ ಉಪದಾನ ಹಾಗೂ ಕುಟುಂಬ ಪಿಂಚಣಿ ಸೌಲಭ್ಯಗಳು ದೊರೆಯದೆ ಅನ್ಯಾಯವಾಗುತ್ತಿದೆ. ಹಾಗಾಗಿ ಕೂಡಲೇ ಈ ಬಗ್ಗೆ ಗಮನ ಹರಿಸಿ ಸರ್ಕಾರದ ಆದೇಶಾನುಸಾರ ಸಂಬಂಧಿಸಿದ ಎಲ್ಲ ನಿವೃತ್ತ ನೌಕರರಿಗೂ ನಿವೃತ್ತಿ ನಂತರದ ಸೌಲಭ್ಯಗಳನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಕೋರಿದ್ದಾರೆ.